ಥೇಟ್ ನನ್ನಂತೆಯೇ..!—-

‘ಹೌದೇನೇ ಉಮಾ ಹೌದೇನೇ ಜಗವೆನ್ನುವುದಿದು ನಿಜವೇನೇ ?’ -ಇವು ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಜನಪ್ರಿಯ ಸಾಲುಗಳು. ಯಾಕೋ ಗೊತ್ತಿಲ್ಲ ಆಗೀಗ ಈ ಸಾಲುಗಳು ನನ್ನ ಮನದೊಳಗೆ ಗುಂಯ್ ಗುಡುತ್ತಲೇ ಇರುತ್ತದೆ.ಹಾಗಿರುವಾಗ ಈ ಸಾಲುಗಳು ನಿಜವೇನೋ ಎನ್ನುವಂತೆ ಉಮಾ ಮುಕುಂದ್ ತಮ್ಮ ಕವಿತೆಗಳೊಂದಿಗೆ ರಂಗ ಪ್ರವೇಶಿಸಿಯೇಬಿಟ್ಟರು. ಮುಕುಂದ್, ಮುಕುಂದ್ ಮತ್ತು ಮುಕುಂದ್ ಕುಟುಂಬದಲ್ಲಿ ಎ ಎನ್ ಮುಕುಂದ್ ಹಾಗೂ ಪ್ರತೀಕ್ ಮುಕುಂದ್ ಇಬ್ಬರೂ ಕ್ಯಾಮೆರಾ ಕಣ್ಣಿನ ಮೂಲಕ ಜಗತ್ತನ್ನು ಅಳೆದವರು. ಆ ಕಾರಣಕ್ಕಾಗಿಯೇ ಸಾಕಷ್ಟು ಬೆಳಕನ್ನು ಪಡೆದವರು. ಈ ಇಬ್ಬರೂ ಕ್ಯಾಮೆರಾ ಕಣ್ಣಿನಿಂದ ಜಗತ್ತನ್ನು ನೋಡುತ್ತಿರುವ ವೇಳೆ ಸದ್ದಿಲ್ಲದೇ ಕಾವ್ಯ ಕಣ್ಣಿನ ಮೂಲಕ ಜಗತ್ತನ್ನು ನೋಡಲು ಹೊರಟವರು ಉಮಾ ಮುಕುಂದ್. ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಅವರು ತಮ್ಮ ಕೃತಿಯಲ್ಲಿ ಹೇಗೆ ಉಮಾ ತಮ್ಮ ಫೋಟೋ ಯಾನದ ಭಾಗವಾಗಿದ್ದರು ಹಾಗೂ ಅದರ ಯಶಸ್ಸಿನ ಪಾಲುದಾರರು ಎನ್ನುವುದನ್ನು ಹೇಳಿದ್ದಾರೆ. ಅಷ್ಟು ಮಾತ್ರ ಎಂದು ನಾವೆಲ್ಲರೂ ಅಂದುಕೊಂಡಿರುವಾಗ ಉಮಾ ಕವಿತೆಗಳ ಮೂಲಕ ಮಾತನಾಡಲಾರಂಭಿಸಿದರು. ತಮ್ಮ ಬದುಕಿನ ಐದು ದಶಕದ ನಂತರ. ಆಗಲೇ ಜಿ ಎಸ್ ಎಸ್ ಕವಿತೆಗೆ ಆದ ಆಶ್ಚರ್ಯ ನನಗೂ ಆದದ್ದು.
ಉಮಾ ಮುಕುಂದ್ ಅವರ ಕವಿತೆಗಳು ಫೇಸ್ ಬುಕ್ ನಲ್ಲಿ ತುಂಬು ಸಂಕೋಚದಿಂದ ಇಣುಕಲು ಆರಂಭಿಸಿದಾಗ ನಾನು ‘ಅವಧಿ’ಗಾಗಿ ಅವರ ಒಂದಷ್ಟು ಕವಿತೆಗಳನ್ನು ಓದುವ ಅವಕಾಶ ದೊರೆಯಿತು. ಅಷ್ಟೇ..! ನಂತರ ಅವರ ಕವಿತೆಗಳ ಗುಂಗಿನಲ್ಲಿ ಸಿಕ್ಕಿಕೊಂಡೆ. ಯಾಕೆಂದರೆ ಅವರು ‘ಥೇಟ್ ನನ್ನಂತೆಯೇ..’ ಅವರ ಕವಿತೆಗಳು ಸಹಜವಾಗಿ ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ,  ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ ಪಾಯಸ ಬರುತ್ತಿರುವುದನ್ನು ಗೊತ್ತು ಮಾಡಿಕೊಳ್ಳುತ್ತದೆ. ಹತ್ತು ರೂಪಾಯಿಗೆ ಮೂರು ನಿಂಬೆಹಣ್ಣು ಕೊಳ್ಳಲು ಇಡೀ ಬುಟ್ಟಿಯನ್ನೇ ತಲೆಕೆಳಗು ಮಾಡುತ್ತದೆ, ಅಬ್ಬರದ ನಗುವಿನ ಮಧ್ಯೆ ಭಿಕ್ಕುಗಳನ್ನು ಹುಡುಕುತ್ತದೆ, ಸುಬ್ಬಮ್ಮನ ಅಂಗಡಿಯ ಸಾರಿನ ಪುಡಿ, ಡಿಮಾನಿಟೈಸೇಷನ್ ನಂತರದ ಜಿ ಎಸ್ ಟಿ.. ಹೀಗೆ ಉಮಾ ಮುಕುಂದ್ ಅವರ ಕವಿತೆ ಕಿರೀಟ ಸಿಕ್ಕಿಸಿಕೊಂಡು ಅಂಬಾರಿಯಲ್ಲೇ ಪಯಣ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದೆ.. ಹವಾಯಿ ಚಪ್ಪಲಿಯನ್ನೇ ಮೆಟ್ಟಿ, ಬೇಕೆಂದಕಡೆ ಬಿಂದಾಸಾಗಿ ಸಂಚಾರ ಹೊರಟುಬಿಡುತ್ತದೆ. ಇವರ ಕವಿತೆಗೆ ಕಾಲು ದಾರಿಯೂ  ಗೊತ್ತು, ಹೈವೇಯೂ ಗೊತ್ತು,

ಬಿ ವಿ ಕಾರಂತರು ಸಖತ್ ಮೂಡ್ ನಲ್ಲಿರುವಾಗ ಒಮ್ಮೆ ನನ್ನೊಡನೆ ಮಾತನಾಡುತ್ತ ‘An Actor is like a beggar’s Bag’ ಎಂದಿದ್ದರು. ‘ಒಬ್ಬ ಕಲಾವಿದನಾದವನು ಭಿಕ್ಷುಕನ ಜೋಳಿಗೆಯಂತಿರಬೇಕು. ಅದರಲ್ಲಿ ಸಿಕ್ಕ ಸಿಕ್ಕದ್ದೆಲ್ಲಾ ತುಂಬಿರಬೇಕು. ಅವು ಅರ್ಥಪೂರ್ಣವಾಗಿ ಆಚೆ ಬರಬೇಕು’ ಎನ್ನುತ್ತಿದ್ದರು. ಹಾಗೆ.. ಥೇಟ್ ಹಾಗೆಯೇ ಉಮಾ ಕವಿತೆಗಳು. ಇಲ್ಲಿ ಎಲ್ಲವೂ ಇವೆ. ಕಂಡದ್ದು, ಕೇಳಿದ್ದು, ಸುತ್ತಿದ್ದು, ನಕ್ಕಿದ್ದು, ಹರಟಿದ್ದು.. ಈ ಎಲ್ಲವೂ ನಿಧಾನವಾಗಿ ಐದು ದಶಕದ ಸೋಸುವಿಕೆಗೆ ಒಳಪಟ್ಟು ಕವಿತೆಗಳಾಗಿ ಚಿಮ್ಮಿವೆ.

ಬಿ ಎ ವಿವೇಕ ರೈ ಅವರು ‘ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು’ ಎನ್ನುವ ಅಂಕಣ ಬರಹದಲ್ಲಿ ಮನಸ್ಸುಗಳನ್ನು ಅರಿಯಲು ಬಿಚ್ಚಬೇಕಾದ ಕಟ್ಟಡಗಳೇನು ಎಂದು ವಿವರಿಸಿದ್ದರು. ಉಮಾ ಇಲ್ಲಿ ತಾವೇ ತಾವಾಗಿ ತಮ್ಮ ಕವಿತೆಗಳ ಮೂಲಕ ಆಲಿಸಬೇಕಾದ ದನಿಗಳನ್ನು ಮುಂದಿಟ್ಟಿದ್ದಾರೆ.

ಕವಿತೆಯೆಂಬ ಕ್ಯಾಮೆರಾದಲ್ಲಿ ಕಾಣುವುದಕ್ಕೂ, ಕ್ಯಾಮೆರಾದಲ್ಲಿ ಕಾಣುವ ಲೋಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕ್ಯಾಮೆರಾ ಕಂಡ ಲೋಕದ ಮೂಲಕ ತಮ್ಮ ಜಗತ್ತು ಕಟ್ಟಿಕೊಂಡ ಉಮಾ ಮುಕುಂದ್ ಕವಿತೆಯೆಂಬ ಕ್ಯಾಮೆರಾ ಮೂಲಕ ಹೊಸದನ್ನೇ ನಮಗೆ ಕಾಣಿಸುತ್ತಿದ್ದಾರೆ.
ಇವರ ಕವಿತೆಗಳು ಕಾಫಿ ಡೇಯ  ಕೆಪುಚಿನೊ ಅಲ್ಲ , ನಮ್ಮ ಮನಸ್ಸು ಸದಾ ಹಾತೊರೆಯುವ ಫಿಲ್ಟರ್ ಕಾಫಿ….

ವಿವೇಕ ರೈ ಎಂಬ ಅಕ್ಕರೆ..!

ಪ್ರೊ.ಬಿ.ಎ.ವಿವೇಕ ರೈ ಅವರಿಗೆ ಈಗ ಭರ್ತಿ 72 ವಸಂತ. ಖಂಡಿತವಾಗಿಯೂ ವಸಂತವೇ. ಅವರ ಬದುಕೇ ಹಾಗೆ.. ಸಂಭ್ರಮವನ್ನು ಹಂಚುವ, ನೆರಳನ್ನು ನೀಡುವ ವಸಂತದ ಹಾಗೆ. ನಾನು ಹಾಗೆ ಖಚಿತವಾಗಿ ಹೇಳಲು ಸಾದ್ಯವಾಗಿರುವುದು ಅವರ ಬದುಕಿನ ಇಷ್ಟು ವರ್ಷಗಳಲ್ಲಿ ಸರಿಸುಮಾರು ಅರ್ಧಕಾಲ ಅವರ ಜೊತೆ ಹೆಜ್ಜೆ ಹಾಕಿದ್ದೇನೆ ಎಂಬ ಕಾರಣಕ್ಕೆ.

1992ರಲ್ಲಿ ನಾನು ‘ಪ್ರಜಾವಾಣಿ’ಯ ವರದಿಗಾರನಾಗಿ ಕಡಲನಗರಿಗೆ ಕಾಲಿಟ್ಟಾಗಿನಿಂದ ಇವರ ಜೊತೆಗಿನ ನಂಟು ಗಾಢವಾದರೂ ಇವರ ಜೊತೆ ನಾನು ಕೈ ಕುಲುಕಿದ್ದು 1984ರಲ್ಲಿ. ಮಂಗಳಗಂಗೋತ್ರಿಯಲ್ಲಿ ಇವರು ನಡೆಸಿದ ವಿಚಾರಸಂಕಿರಣದಲ್ಲಿ. ತೇಜಸ್ವಿ ಹಾಗೂ ವಿವೇಕ ರೈ ಅವರನ್ನು ನೋಡಬೇಕೆಂದೇ ಬೆಂಗಳೂರಿನಿಂದ ಬಸ್ಸು ಹತ್ತಿ ಹೋಗಿದ್ದು ನಾನು ಮತ್ತು ಆರ್.ಜಿ.ಹಳ್ಳಿ ನಾಗರಾಜ್. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಜಿ.ಎಸ್.ಶಿವರುದ್ರಪ್ಪನವರು ಹೇಗೋ ಮಂಗಳೂರಿಗೆ ಪ್ರೊ.ವಿವೇಕ ರೈ. ತಾವಿದ್ದ ಕಡೆ ಸಾಹಿತ್ಯದ ಘಮ ಹರಡುವ, ಪ್ರತಿಯೊಬ್ಬರ ಬೆನ್ನಿಗೂ ಇದ್ದೇನೆ ಎನ್ನುವ ಆತ್ಮವಿಶ್ವಾಸ ನೀಡುವ, ತಮ್ಮೊಳಗನ್ನು ಶೋಧಿಸಿಕೊಳ್ಳಲು ಅವಕಾಶ ಮಾಡಿಕೊಡುವ, ಸಕಾರಾತ್ಮಕವಾಗಿ ಯೋಚಿಸುವುದಕ್ಕೆ ದಾರಿ ಮಾಡಿಕೊಡುವ ಗುಣ ಇವರದ್ದು.

‘ಪ್ರೀತಿಯ ಕರೆ ಕೇಳಿ / ಆತ್ಮನ ಮೊರೆ ಕೇಳಿ / ನೀ ಬಂದು ನಿಂದಿಲ್ಲಿ ದೀಪ ಹಚ್ಚಾ….ಎಂದ ಎಸ್.ವಿ.ಪರಮೇಶ್ವರ್ ಭಟ್ ಅವರು ಕಟ್ಟಿದ ಕನ್ನಡ ವಿಭಾಗವನ್ನು ಇನ್ನಷ್ಟು ಹೊಸ ದಿಕ್ಕುಗಳಿಗೆ ಹರಡುವಂತೆ ಮಾಡಿರುವವರು, ಅಲ್ಲಿ ನಿಂತು ದೀಪ ಹಚ್ಚಿದವರು ಪ್ರೊ ಬಿ ಎ  ವಿವೇಕ ರೈ. ಹಾಮಾನಾ ಅವರ ಮಾರ್ಗದರ್ಶನದಲ್ಲಿ ವಿವೇಕ ರೈ ಅವರು ನಡೆಸಿದ ಪಿ ಎಚ್ ಡಿ ಸಂಶೋಧನೆ ‘ತುಳು ಜಾನಪದ’ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಮ್ಮೆಲ್ಲರನ್ನೂ ತಲುಪಿತ್ತು. ತುಳುವಿನ ಬಗ್ಗೆ ಅದರ ಸಂಸ್ಕೃತಿಯ ಬಗ್ಗೆ  ಸಮರ್ಥವಾಗಿ ಮಾತನಾಡಬಲ್ಲ, ಅದಕ್ಕೆ ಹೊಸ ಕಣ್ಣೋಟ ನೀಡಬಲ್ಲ ವಿವೇಕ ರೈ ನಮ್ಮ ಒಳಗೆ ನಡೆದು ಬಂದದ್ದು ಹೀಗೆ. ಆ ನಂತರ ಅವರ ಗಿಳಿಸೂವೆ, ಇರುಳ ಕಣ್ಣು ಅಂಕಣ ಬರಹಗಳು ನಮಗೆ ಜಗತ್ತನ್ನು ನೋಡುವ ಇನ್ನೊಂದು ಬಗೆಯನ್ನೇ ಕಲಿಸಿತು.

ಪ್ರೊ ಬಿ ಎ ವಿವೇಕ ರೈ ಅವರು ಹಾಕಿರುವ 72 ಹೆಜ್ಜೆಗಳು ನನಗೆ ಮಾದರಿ. ಅವರ ನಿಷ್ಕಲ್ಮಷ ಮನಸ್ಸು, ಸದಾ ಹೊಸತನ್ನು ಕಲಿಯುವ ಅವರ ತುಡಿತ, ಸಮಾಜದ ಒಳಿತಿನ ಬಗೆಗಿನ ಕಳಕಳಿ ನನ್ನನ್ನು ನಮ್ರನನ್ನಾಗಿಸಿದೆ. ಶಿವರಾಮ ಕಾರಂತರು ‘ವಿವೇಕ’ ಎನ್ನುವ ಹೆಸರು ಸೂಚಿಸಿದ್ದರಿಂದ ಅವರಿಗೆ ಈ ವಿವೇಕ ಪ್ರಾಪ್ತವಾಯಿತೋ ಇಲ್ಲವೇ ಅವರಲ್ಲಿನ ವಿವೇಕವನ್ನು ಮನಗಂಡೇ ಅವರು ಆ ಹೆಸರು ಸೂಚಿಸಿದರೋ ಗೊತ್ತಿಲ್ಲ. ಅವರು ವಿವೇಕವಂತರು ಎನ್ನುವುದನ್ನು ಜಗತ್ತು ಕಂಡುಕೊಂಡಿದೆ.

ವಿವೇಕ ರೈ ಅವರ ಹೆಜ್ಜೆ ಗುರುತುಗಳನ್ನು ಹಿಡಿದಿಡುವ ಪುಟ್ಟ ಪ್ರಯತ್ನ ಈ ‘ಅಕ್ಕರ ಮನೆ’, ಇಲ್ಲಿ ಅವರು ಬರೆದ ಮೊದಲ ಕಥೆ, ಮೊದಲ ಪ್ರಬಂಧ, ಮೊದಲ ಹಾಡಿನಿಂದ ಹಿಡಿದು ಅವರು ಈಗ ಬರಿಯುತ್ತಿರುವ ಅತ್ಯಂತ ಜನಪ್ರಿಯ ‘ಉದಯವಾಣಿ’ ಅಂಕಣದವರೆಗಿನ ಬರಹಗಳಿವೆ. ಒಂದು ರೀತಿಯಲ್ಲಿ ಇವು ವಿವೇಕ ರೈ ಅವರ ಬರಹ ಲೋಕದ ಹೆಜ್ಜೆ ಗುರುತುಗಳ ಲೋಕ, ತುಳು ಗಾದೆ, ಒಗಟು, ಫೇಸ್‍ಬುಕ್ ಬರಹ, ಅಂಕಣ, ಮುನ್ನುಡಿ, ಅನುವಾದ, ಚಿತ್ರಗೀತೆ, ವ್ಯಕ್ತಿಚಿತ್ರ, ವಿಶ್ಲೇಷಣೆ, ಚುಟುಕುಗಳು ಎಲ್ಲವೂ ಇವೆ.

72 ತುಂಬಿದ ವಿವೇಕ ರೈ ಅವರನ್ನು ಇನ್ನಷ್ಟು ಆಪ್ತವಾಗಿಸಿಕೊಳ್ಳಲು ಈ ‘ಅಕ್ಕರ ಮನೆ’ ಒಂದು ಪುಟ್ಟ ಪ್ರಯತ್ನ. ವಿವೇಕ ರೈ ಅವರ ಕಾರ್ಯಕ್ಷೇತ್ರ ಎಷ್ಟು ವಿಸ್ತಾರವಾಗಿತ್ತು ಹಾಗೂ ಎಷ್ಟು ವೈವಿಧ್ಯಮಯವಾಗಿತ್ತು ಎನ್ನುವುದಕ್ಕೆ ಇದು ಪುಟ್ಟ ಕೈಗನ್ನಡಿ. ಬದುಕಿನ ಪ್ರತಿಯೊಂದರ ಬಗ್ಗೆಯೂ ಅವರಿಗಿರುವ ಆಸಕ್ತಿ, ಪ್ರತಿಯೊಂದಕ್ಕೂ ಅಪ್ಡೇಟ್ ಆಗುವ ಗುಣವನ್ನು ಈ ಕೃತಿ ನಮಗೆ ಸದ್ದಿಲ್ಲದಂತೆ ಮನವರಿಕೆ ಮಾಡಿಕೊಡುತ್ತದೆ.

‘ಬಾಳೆಗಿಡ ಗೊನೆ ಹಾಕಿತು’ ಎನ್ನುವುದು ಬಿ ಎಂ ಬಷೀರ್ ಅವರ ಕಥಾ ಸಂಕಲನ. ಯಾಕೋ ಈ ರೂಪಕ ಈಗ, ಈ ಕೃತಿ ಹೊರಬರುತ್ತಿರುವ ಸಂಧರ್ಭದಲ್ಲಿ ನನ್ನನ್ನು ಮೇಲಿಂದ ಮೇಲೆ ಕಾಡುತ್ತಿದೆ. ವಿವೇಕ ರೈ ಎಂಬ ಬಾಳೆಗಿಡ ಎಷ್ಟೊಂದು ಪ್ರತಿಭೆಗಳ ಗೊನೆಗೆ ಕಾರಣವಾಗಿದೆ ಎನ್ನುವುದು ನನ್ನ ಅಚ್ಚರಿ.

 

 

ಅಂಗೋಲಾದಲ್ಲಿನ ‘ಸುರತ್ಕಲ್ ಎಕ್ಸ್ ಪ್ರೆಸ್’——-

ಹೋದೆಡೆಯಲ್ಲಾ ಸಂಗ್ರಹಿಸಿದ ಬ್ರೋಚರ್, ಬರೆಯಲು ಕುಳಿತಾಗ  ಒಂದಿಷ್ಟು ಗೂಗಲ್ ಹುಡುಕಾಟ, ಇದರ ಜೊತೆಗೆ ತಿಂದದ್ದು ಉಂಡದ್ದು ಸೇರಿಸಿದರೆ ಒಂದು ಪ್ರವಾಸ ಕಥನ ಸಿದ್ಧ ಎನ್ನುವ ಕಾಲದಲ್ಲಿ ಪ್ರಸಾದ್ ನಾಯ್ಕ್ ‘ಹಾಯ್ ಅಂಗೋಲಾ’ ಹಿಡಿದು ನಿಂತಿದ್ದಾರೆ.

ಒಂದು ಪ್ರವಾಸ ಕಥನ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗುವಂತೆ ಈ ಅಂಗೋಲಾ ಕಥನ ಮೂಡಿ ಬಂದಿದೆ. ದೇಶ ಅಂದರೆ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಎಂದಷ್ಟೇ ಕಾಣಿಸುತ್ತಿರುವ ಪ್ರವಾಸ ಕಥನಗಳ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ಅಂಗೋಲಾ ಸೇರಿಕೊಳ್ಳುತ್ತಿದೆ. ಕ್ಯೂಬಾ ಎಲ್ಲಿದೆ? ಎಂದು ನಾನು ಕ್ಯೂಬಾಗೆ ಹೊರಟಾಗ ಕೇಳಿದಂತೆಯೇ ಪ್ರಸಾದ್ ಗೆ ಅಂಗೋಲಾ ಎಲ್ಲಿದೆ ಎಂದು ಕೇಳಿದವರೂ ಇದ್ದಾರೆ. ಅಮೆರಿಕಾ ಯಾವುದನ್ನು ದೇಶ ಎಂದು ಭಾವಿಸಿದೆಯೋ ಅದನ್ನು ಮಾತ್ರ ದೇಶ ಎಂದು ನಂಬಿಕೊಳ್ಳುವ ಕಾಲಘಟ್ಟದಲ್ಲೇ ಇದ್ದೇವೆ. ಇದಕ್ಕೆ ಕಾರಣ ‘ಅಮೆರಿಕಾ ಕನ್ನಡಕ’ ಹಾಕಿಕೊಂಡ ಮಾಧ್ಯಮಗಳು. ಯಾವುದೇ ಎರಡು ದೇಶಗಳ ಮಧ್ಯೆ ಅಮೆರಿಕಾದ ಪತ್ರಿಕಾ ಗೋಡೆಗಳಿವೆ. ಹಾಗಾಗಿಯೇ ಅಮೆರಿಕಾದ ತಾಳಕ್ಕೆ ಕುಣಿಯುವ, ಮಣಿಯುವ ದೇಶಗಳನ್ನು ಹೊರತುಪಡಿಸಿದರೆ ಈ ಮೀಡಿಯಾ ಗೋಡೆಗಳ ಆಚೆ ಇನ್ನೊಂದು ದೇಶ ಕಾಣುವುದಿಲ್ಲ. ಹಾಗೆ ಕತ್ತಲಲ್ಲೇ ಉಳಿದುಹೋದ ದೇಶವೆಂದರೆ ಅಂಗೋಲಾ.

ಪ್ರಸಾದ್ ನಾಯ್ಕ್ ಗೆ ಅಂಗೋಲಾ ಆಯ್ಕೆಯಾಗಿರಲಿಲ್ಲ. ಒಬ್ಬ ನಿಪುಣ ಎಂಜಿನಿಯರ್ ಗೆ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಕೆಲಸಮಾಡಲು ತೋರಿಸಿದ ಜಾಗ ಮಾತ್ರ ಆಗಿತ್ತು. ಆದರೆ ಪ್ರಸಾದ್ ನಾಯ್ಕ್ ಅಂಗೋಲಾದ ಆತ್ಮವನ್ನು ಹೊಕ್ಕಿರುವ ರೀತಿ ಎಲ್ಲರಿಗೂ ಬೆರಗುವೊಡೆಸುವಂತಿದೆ. ಈ ಕಾರಣಕ್ಕಾಗಿಯೇ ನನಗೆ ಪ್ರಸಾದ್ ನಾಯ್ಕ್ ಇಷ್ಟ. ಯಾವುದೋ ದೇಶ, ಯಾವುದೋ ಊರು, ಯಾವುದೋ ಭಾಷೆ ಎಂದು ಪ್ರಸಾದ್ ನಾಯ್ಕ್ ಕೊರಗುತ್ತಾ ಕೂರಲಿಲ್ಲ. ಬದಲಿಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಆ ದೇಶದ ಮೂಲೆ ಮೂಲೆ ಸುತ್ತಿದ್ದಾರೆ. ಭಾಷೆ ಗೊತ್ತಿಲ್ಲದೇ, ಸಂಸ್ಕೃತಿ ಗೊತ್ತಿಲ್ಲದೇ ಅಲ್ಲಿನ ಜನರೊಡನೆ ಸಂವಾದಿಸಿದ್ದಾರೆ. ಊರು ಕೇರಿ ತಿರುಗಿ ಅವರ ಸಂಸ್ಕೃತಿ ಅರಿತಿದ್ದಾರೆ. ಹುಡುಗಿಯರೊಂದಿಗೆ ಲಲ್ಲೆ ಹೊಡೆದಿದ್ದಾರೆ. ಅಂತಹ ಇನ್ನೂ ಬೆಳಕು ಕಾಣದ ದೇಶದಲ್ಲೂ ನೀರು ಉಕ್ಕಲು ತಮ್ಮ ಕೊಡುಗೆ ನೀಡಿದ್ದಾರೆ.ಆಫ್ರಿಕಾ ಖಂಡದ ದೇಶಗಳು ನಮ್ಮ ಕಣ್ಣಳತೆಗೆ ಸಿಗದೇ ಇರಲು ಮುಖ್ಯ ಕಾರಣವೇ ಅದನ್ನು ದೇಶಗಳೇ ಅಲ್ಲ ಎನ್ನುವಂತೆ ಭೂಗೋಳದ ರಾಜಕೀಯ ಹೊಸಕಿ ಹಾಕಿರುವುದು . ‘ಅಮೇರಿಕಾದವನು / ಭೂಮಂಡಲದ ಚೆಂಡನ್ನು / ಎತ್ತ ಒದ್ದರೂ / ಗೋಲ್ ಅವನದೇ..’ ಎನ್ನುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗಿದೆ. ಜಗತ್ತು ಏಕ ಚಕ್ರಾಧಿಪತ್ಯಕ್ಕೆ, ಏಕ ವ್ಯಕ್ತಿ ಪ್ರಾಧಾನ್ಯತೆಗೆ ಸಿಕ್ಕು ಹೋದರೆ ಆಗುವ ಪರಿಣಾಮವೇ ಇದು. ಭೂಪಟದಲ್ಲಿ ಎಷ್ಟು ದೇಶಗಳಿವೆ ಎಂದು ಎಣಿಸಿ ಹೇಳುವವರು ಯಾರು?? ಈ ಕಾರಣಕ್ಕಾಗಿಯೇ ನಮ್ಮದೇ ಸುರತ್ಕಲ್ ನ ಹುಡುಗ ನೇರಾ ನೇರ ಕಂಡ ಬದುಕು ಮುಖ್ಯವಾಗುವುದು. ಪ್ರಸಾದ್ ನಾಯ್ಕ್ ಅವರ ಈ ಕೃತಿಗೆ ತನ್ನದೇ ಮಹತ್ವವಿದೆ.

ಈ ಕೃತಿ ಒಂದು ದಯನೀಯ ಬದುಕನ್ನು ನಡೆಸುತ್ತಿರುವ ದೇಶದ ಕಥೆಯನ್ನು ಬಿಚ್ಚಿಡುತ್ತಿದೆ. ಯಾವುದೇ ಪತ್ರಿಕೆ, ಪುಸ್ತಕ, ಸರ್ಚ್ ಗಳನ್ನೂ ಅವಲಂಬಿಸದೇ ಖುದ್ದು ಕಂಡ ಬದುಕು ಸಾಮ್ರಾಜ್ಯಶಾಹಿ ಶಕ್ತಿಗಳು ಹೇಗೆ ಅನೇಕ ದೇಶಗಳನ್ನು ಉಸಿರುಕಟ್ಟಿಸಿಬಿಡುತ್ತದೆ ಎನ್ನುವುದನ್ನು ತೋರಿಸುತ್ತಿದೆ. ಅನೇಕ ದೇಶಗಳ ಬದುಕುವ ಹಕ್ಕನ್ನು ಹೊಸಕಿ ಹಾಕಿರುವ ರೀತಿಯನ್ನು ತೋರಿಸಿದೆ. ಮುಂದೆ ಜಗತ್ತಿನ ಕಥೆ ಬರೆಯುವವರಿಗೆ ಖಂಡಿತಾ ಆಧಾರವಾಗುವ ಪುಸ್ತಕಗಳಲ್ಲೊಂದು.

ನಾಲ್ಕು ಕೋಣೆಯ ಮಧ್ಯೆ ಎಂಜಿನಿಯರಿಂಗ್ ಓದಿದ ಹುಡುಗ ಅದ್ಭುತ ಬರವಣಿಗೆಯನ್ನು ತನ್ನದಾಗಿಸಿಕೊಂಡಿರುವ ರೀತಿ ಇದೆಯಲ್ಲ ಅದು ನನ್ನಲ್ಲಿ ವಿಸ್ಮಯವನ್ನುಂಟುಮಾಡಿದೆ. ಸು ರಂ ಎಕ್ಕುಂಡಿ ಅವರು ‘ಕಣಗಿಲು ಗಿಡದಲ್ಲಿ ಹುಡುಗ’  ಕವಿತೆಯಲ್ಲಿ ನಾಲ್ಕು ಗೋಡೆಯ ದಾಟಿ ಬಂಡ ಹುಡುಗ ಬದುಕನ್ನು ಅರಿಯುವ ರೀತಿ ಬಣ್ಣಿಸಿದ್ದಾರೆ. ಪ್ರಸಾದ್ ನಾಯ್ಕ್ ಖಂಡಿತಾ ಅದೇ ಕಣಗಲು ಗಿಡದ ಹುಡುಗನಂತೆಯೇ ನನಗೆ ಕಂಡಿದ್ದಾರೆ.

ಅಂಗೋಲಾದಲ್ಲಿದ್ದ ಪ್ರಸಾದ್, ಬೆಂಗಳೂರಿನ ನನ್ನ ನಡುವೆ ಬೆಸುಗೆಗೆ ವೇದಿಕೆಯಾಗಿದ್ದು ‘ಅವಧಿ’ (avadhimag.com). 50 ವಾರಗಳ ಕಾಲ ಪ್ರಸಾದ್ ಅತ್ಯಂತ ಶಿಸ್ತಿನಿಂದ, ಅತ್ಯಂತ ಪ್ರೀತಿಯಿಂದ ಅಂಗೋಲಾ ಕಥನವನ್ನು ಬರೆದಿದ್ದಾರೆ. ‘ದೂರದಲಿ ಇದ್ದವರನು ಹತ್ತಿರಕೆ ತರಬೇಕು ಎರಡು ದಂಡೆಗೂ ಉಂಟಲ್ಲ ಎರಡು ತೋಳು’ ಎನ್ನುವುದನ್ನು ಅರಿತ ಪ್ರವಾಸ ಕಥನಕಾರರು ತುಂಬಾ ತುಂಬಾ ಕಡಿಮೆ. ಪ್ರಸಾದ್ ನಾಯ್ಕ್ ಅವರ ಈ ಪ್ರವಾಸ ಕಥನದಲ್ಲಿ ಇರುವ ಮುಖ್ಯ ಕಾಳಜಿಯೇ ಆ ಪ್ರೀತಿ. ಅವರ ಕಣ್ಣೋಟ ಖಂಡಿತಾ ವಿಶಿಷ್ಟವಾದದ್ದು ಎನ್ನುವುದುನ್ನು ಈ ಕೃತಿ ಗೊತ್ತುಮಾಡಿಸುತ್ತದೆ. ಅಂಗೋಲಾದಲ್ಲಿ ಹಲವು ವರ್ಷ ಕಳೆದ ನಮ್ಮ ‘ಸುರತ್ಕಲ್ ಎಕ್ಸ್ ಪ್ರೆಸ್’ನ ಈ ಕಥನವನ್ನು ನೀವು ಓದದಿದ್ದರೆ ನಷ್ಟ ನಿಮ್ಮದೇ..

ನಿನ್ನೊಳು ನಾ, ನನ್ನೊಳು ನೀ..

‘ಬೆಟ್ಟದಿಂದ ಬಟ್ಟಲಿಗೆ’ ನನ್ನನ್ನು ಇನ್ನಿಲ್ಲದಂತೆ ಕಾಡಿದ ಕೃತಿ. ಜಾನಪದ ಲೋಕವನ್ನು ಕಟ್ಟಿದ ಎಚ್ ಎಲ್ ನಾಗೇಗೌಡರ ಕೃತಿ. ಕಾಫಿ ಬೀಜ ತನ್ನ ಪಯಣವನ್ನು ಆರಂಭಿಸಿ ಬೆಟ್ಟಗಳಿಂದ ನಮ್ಮ ಅಂಗೈನಲ್ಲಿದ್ದ ಕಪ್ ಗಳಿಗೆ ಇಳಿದು ಬಂದ ಕಥೆ. ಆ ಕೃತಿ ಓದುವಾಗ ನನಗರಿವಿಲ್ಲದೆ ಕಾಫಿಯ ಘಮ ನನ್ನೊಳಗೆ ಇಳಿದುಹೋಗಿತ್ತು. ಅಂದಿನಿಂದ ಇಂದಿನವರೆಗೂ ಕಾಫಿ ನನ್ನನ್ನು ಅಡಿಯಾಳಾಗಿಸಿಕೊಂಡಿದೆ. ಕಾಫಿಗಿರುವ ಶಕ್ತಿ ಅಂತಹದ್ದು.

ಅದಾಗಿ ಸಾಕಷ್ಟು ಕಾಲವಾಗಿತ್ತು. ನಾನು ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡುತ್ತಿದ್ದಾಗ ಎಂ ಜಿ ರೋಡ್ ನ ನಮ್ಮ ಕಚೇರಿಯ ಪಕ್ಕದಲ್ಲೇ ಇದ್ದ ‘ಕಾಫಿ ಹೌಸ್’ ನನ್ನ ಪ್ರೇಕ್ಷಣೀಯ ಸ್ಥಳವಾಗಿ ಹೋಯ್ತು. ದಿನಕ್ಕೆ ಏನಿಲ್ಲೆಂದರೂ 20 ಕಾಫಿಯನ್ನು ಸಲೀಸಾಗಿ ಒಳಗಿಳಿಸಿಕೊಳ್ಳುತ್ತಿದ್ದ ನನಗೆ ಕಾಫಿ ನನ್ನ ಅನುದಿನದ ಜೊತೆಗಾರನಾಗಿ ಹೋಯಿತು. ನನ್ನ ಬದುಕಿನ ಬೆಸ್ಟ್ ಮೊಮೆಂಟ್ ಯಾವುದು ಎಂದರೆ ನನಗೆ ನೆನಪಾಗುವುದರಲ್ಲಿ  ಬೆಳ್ಳಂಬೆಳಗ್ಗೆ ಕಣ್ಣು ಬಿಡುತ್ತಿದ್ದಂತೆಯೇ ನನ್ನೆದುರು ಹಾಜರಾಗುತ್ತಿದ್ದ ಕಾಫಿ ಕ್ಷಣವೂ ಒಂದು. ಆ ನಂತರ ಕಾಫಿ ಸುತ್ತಲೇ ನಾನು ಒಂದು ಜಗತ್ತನ್ನು ಸೃಷ್ಟಿಸಿಕೊಂಡೆ. ಕಾಫಿ ಬೋರ್ಡ್ ನ ಬಳಿ ಹೀಗೇ ಒಮ್ಮೆ ಹಾದು ಹೋಗುವಾಗ coffee drinkers are true lovers ಎನ್ನುವ ಸಾಲು ಕಣ್ಣಿಗೆ ಬಿತ್ತು. ಕಾಫಿ ಹಾಗೂ ಪ್ರೇಮ.. ಆಹಾ! ಎಂತಹ ಅದ್ಭುತ ಕಾಂಬಿನೇಷನ್.

ಕೆ ನಲ್ಲ ತಂಬಿ ಕಾಫಿ ಆಧ್ಯಾತ್ಮವನ್ನು ಫೇಸ್ ಬುಕ್ ನಲ್ಲಿ ಹಂಚಲು ಆರಂಭಿಸಿದಾಗ ನಾನು ಒಂದೇ ಏಟಿಗೆ ಅದಕ್ಕೆ ‘ಫಿದಾ’ ಆಗಿದ್ದು ಈ ಕಾರಣಕ್ಕೆ. ಅವರು ಬಣ್ಣಿಸಿರುವ ‘ಕೋಶಿ’ಸ್’ ನನಗೆ ನನ್ನ ಕಾಫಿ ಹೌಸ್ ನ ಘಳಿಗೆಗಳನ್ನು ನೆನಪಿಗೆ ತಂದಿತು, ನನ್ನ ಯೌವನದ ಓಣಿಯಲ್ಲಿ ಓಡಾಡಲು ನಲ್ಲತಂಬಿ ಈ ಕವಿತೆಗಳ ಸೇತುವೆ ಒದಗಿಸಿಕೊಟ್ಟರು. ಹಾಗೆ ನೋಡಿದರೆ ಕಾಳಿಮುತ್ತು ನಲ್ಲತಂಬಿ ಸಾಹಿತ್ಯ ಲೋಕದ ಸೇತುವೆಯೇ. ಕನ್ನಡ ಮತ್ತು ತಮಿಳಿನ ನಡುವೆ ಇರುವ ಮಹತ್ವದ ಸೇತುವೆ. ಎರಡೂ ಭಾಷೆಗಳ ಮೇಲೆ ಸ್ಪಷ್ಟ ಹಿಡಿತ ಹೊಂದಿರುವ ನಲ್ಲತಂಬಿ ಸರ್ ಎರಡೂ ಭಾಷೆಯ ಮಹತ್ವದ ಕೃತಿಗಳನ್ನು ನಮ್ಮ ಕೈಗಿಟ್ಟಿದ್ದಾರೆ.

ಸದಾ ಮುಗುಳ್ನಗುವ, ಅವರೊಡನೆ ಎರಡು ಮಾತನಾಡಿದರೆ ಸಾಕು ಆತ್ಮೀಯ ಎನಿಸಿಬಿಡುವ, ನಾಲ್ಕು ಮಾತಿಗೆ ಕೋಶಿ’ಸ್ ನಲ್ಲಿ ಅವರ ಜೊತೆ ಕಾಫಿ ಕುಡಿಯಲು ಕಾರಣವಾಗಿಬಿಡುವ ವ್ಯಕ್ತಿತ್ವ ಅವರದ್ದು. ‘ನಲ್ಲತಂಬಿ, ವಿನ್ಸೆಂಟ್ ಹಾಗೂ ಕಾಫಿ’ ಈ ಮೂರೂ ಸಖತ್ ಕಾಂಬಿನೇಷನ್. ‘ನಿನ್ನೊಳು ನಾ, ನನ್ನೊಳು ನೀ, ಒಲಿದಮೇಲುಂಟೆ ನಾ..ನೀ..’ ಎನ್ನುವ ಪುತಿನ ಅವರ ಕವಿತೆಯಂತೆ ನಲ್ಲತಂಬಿಯವರೊಳಗೆ ಕಾಫಿಯೋ, ಕಾಫಿಯೊಳಗೆ ನಲ್ಲತಂಬಿಯವರೋ ಗೊತ್ತಿಲ್ಲ. ಆದರೆ ನಲ್ಲತಂಬಿಯವರು ಮೊಗೆದು ಕೊಟ್ಟಿರುವ ಕಾಫಿ ಜ್ಞಾನ ನಮ್ಮೊಳಗೆ ಹಬೆಯಾಡುತ್ತಲೇ ಇರುತ್ತದೆ.

ಕಾಣದ ಕಡಲಿನ ಮೊರೆತದ ಜೋಗುಳ.. ——-

ಹೌದಾ..!! ಎಂದು ಕಣ್ಣನ್ನು ಅಷ್ಟೂ ಅಗಲ ಬಿಟ್ಟು ಕೇಳಿದ್ದೆ. ನನ್ನ ಸಂಗಾತಿಯ ಒಡಲೊಳಗೆ ಒಂದು ಜೀವ ಅರಳಲು ಸಜ್ಜಾಗುತ್ತಿದೆ ಎನ್ನುವ ವಿಷಯ ನನ್ನ ಕಿವಿಗೆ ಬಿದ್ದಾಗ ನನಗೆ ಹೇಳಲು ಸಾಧ್ಯವಾದದ್ದು ಅಷ್ಟು.

ಆಮೇಲೆ ನನ್ನ, ಅವಳ ಜೊತೆಗೆ ಅದುವರೆಗೆ ಇದ್ದದ್ದಕ್ಕಿಂತ ಭಿನ್ನವಾದ ಒಂದು ಸಂಗೀತ ಸುಳಿಯುತ್ತಾ ಇದ್ದದ್ದು ಮೇಲಿಂದ ಮೇಲೆ ಅರಿವಿಗೆ ಬರುತ್ತಾ ಹೋಯಿತು. ಅವಳ ಹಿಂದೆ ಮುಂದೆಯೇ ಸುತ್ತುತ್ತಾ, ಸ್ಕೂಟರ್ ಅನ್ನು ಹಳ್ಳ ಕೊಳ್ಳದಲ್ಲಿ ಕುಲುಕದಂತೆ ನಡೆಸುತ್ತಾ.. ನಾನು ಮಹಾ ಜವಾಬ್ದಾರಿ ಎನ್ನುವಂತೆ ವರ್ತಿಸುತ್ತಿದ್ದುದಷ್ಟೇ ನನ್ನಲ್ಲಿ ಆದ ಬದಲಾವಣೆ. ಆದರೆ ಅವಳು ಪ್ರತೀ ದಿನ ಸುಸ್ತು, ಸಂಕಟ ಎಲ್ಲವನ್ನೂ ತನ್ನ ಮುಗುಳ್ನಗುವಿನ ಲೇಪನದೊಳಗೆ ಅಡಗಿಸಿಟ್ಟುಕೊಳ್ಳುತ್ತಾ ಹೋದಳು. ಮುಂದೊಂದು ದಿನ ಅವಳ ಹೊಟ್ಟೆಯೊಳಗೆ ಎರಡು ಪಾದಗಳು ಸ್ಪಷ್ಟವಾಗಿ ಕಾಣುತ್ತಿತ್ತು. ಕೈಯಿಟ್ಟರೆ ಒದ್ದು.. ‘ಕಾಣದ ಕಡಲಿನ ಮೊರೆತದ ಜೋಗುಳ’ದ ಅನುಭವ ನೀಡುತ್ತಿತ್ತು. ಆಗಸದಲ್ಲಿ ತುಂಬು ಚಂದ್ರಮನಿದ್ದ ಒಂದು  ದಿನ ಅವಳೊಂದಿಗೆ ಮೂರನೆಯ ಜೀವವನ್ನು ಬರಮಾಡಿಕೊಳ್ಳಲು ಅವಳ ತವರ ಸೇರಿಕೊಂಡೆವು.

ಇನ್ನೇನು ಹೆರಿಗೆ ಕೋಣೆಗೆ ಹೋಗಲು ನಿಮಿಷವಿರುವಾಗ ಅವಳು ನನ್ನ ಹುಡುಕಿ ಬಂದವಳೇ ‘ಏಯ್ ಹೆದರ್ಕೋಬೇಡ, ಎರಡು ನಿಮಿಷ ಅಷ್ಟೇ..’ ಅಂದವಳೇ ಔಷಧದ ಕಟು ಘಮವಿದ್ದ ಕೋಣೆಯೊಳಗೆ ಸೇರಿಹೋದಳು. ಸ್ವಲ್ಪ ಹೊತ್ತಿನೊಳಗೇ ದೇವಲೋಕದಿಂದ ಒಂದು ಹೂ ನನ್ನನ್ನೇ ಹುಡುಕುತ್ತಾ ಬಂತೇನೋ ಎನ್ನುವಂತೆ ನನ್ನ ಅಂಗೈಯೊಳಗೆ ‘ಕಿನ್ನರಿ’ ಎಂಬ ಗುಬ್ಬಚ್ಚಿಯಿತ್ತು. ನಾನೂ, ಅವಳು, ಕಿನ್ನರಿ ಎಂಬ ಗುಬ್ಬಚ್ಚಿಯೂ.. ಜೊತೆ ಜೊತೆಯಾಗಿಯೇ ಬಾಣಂತನದ ಲೋಕದೊಳಗೆ ಈಜಾಡಿದ ರೀತಿ ಇದು.

ನನಗೆ ಗೊತ್ತಾಗಿದ್ದು ಅಷ್ಟೇ…

ಹಾಗಾಗಿಯೇ ನನಗೂ ಕುತೂಹಲವಿತ್ತು. ಮಗು ಹುಟ್ಟುವ ಬಗ್ಗೆ, ಹುಟ್ಟಿದ ನಂತರ ಮುಂದೇನು ಎನ್ನುವುದರ ಬಗ್ಗೆ. ಹೆರಿಗೆ ಕೋಣೆಯೊಳಗೆ ನಗು ನಗುತ್ತ ನಾದದ ನದಿಯಂತೆ ನಡೆದುಹೋದ ಅವಳು ಮಗು ಹುಟ್ಟಿದ ನಂತರ ನೋವಿನ ಆಲಾಪ ಹೊರಡಿಸುತ್ತಿದ್ದುದು ಇನ್ನೂ ನನ್ನ ಕಿವಿಯೊಳಗೆ ಗುಂಯ್ ಗುಟ್ಟುತ್ತಿದೆ.

ಅಂತಹ ಇನ್ನೊಂದು ಜೋಡಿಯ ನೋವು, ನಲಿವಿನ ಆಲಾಪವೇ ಈ ‘ಬಾಳಂತಿ ಪುರಾಣ’.

‘ಅಪ್ಪ, ಮಗು ಹುಟ್ಟೋದು ಹೇಗೆ?’ ಎನ್ನುವ ಪ್ರಶ್ನೆಯೊಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹೊರತಂದ ಪುಸ್ತಕದಲ್ಲಿತ್ತು. ಮಕ್ಕಳಿಗೆ ವಿಜ್ಞಾನ ಲೋಕದ ಕೌತುಕವನ್ನು ಹಂಚಲು ಹೊರತಂದ ಪುಸ್ತಕ ಅದು. ಒಂದು ಜೀವ ಕಣ್ಣು, ಮೂಗು ಲೇಪಿಸಿಕೊಂಡು ಹೊರ ಜಿಗಿಯುವ, ಬೆಳೆಯುವ ಕೌತುಕವನ್ನು ನಾವು ಒಂದು ಗುಟ್ಟಾಗಿ ಉಳಿಸಿಬಿಟ್ಟಿರುವುದು ಏಕೆ ಎನ್ನುವ ಅಂಶ ನನ್ನನ್ನು ಕಾಡುತ್ತಲೇ ಇತ್ತು. ಜೀವ ವಿಜ್ಞಾನದ ಒಂದು ಮಹತ್ತರ ಬೆಳವಣಿಗೆಯನ್ನು ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಿಬಿಟ್ಟಿದ್ದೆವು. ಅಂತಹ ಅಪರಿಚಿತ ಕತ್ತಲ ಲೋಕದ ಪರದೆಯನ್ನು ಶ್ರೀಕಲಾ ಡಿ ಎಸ್ ಸರಿಸಿದ್ದಾರೆ.

ಅನುಪಮಾ ನಿರಂಜನ ಅವರು ಇಂದಿಗೂ ನಮ್ಮ ನೆನಪಿನಲ್ಲುಳಿದಿರುವುದಕ್ಕೆ ಅವರು ಬರೆದ ಸಾಹಿತ್ಯ ಒಂದು ತೂಕವಾದರೆ ಅಷ್ಟೇ ತೂಕ  ಅವರ ‘ಕೇಳು ಕಿಶೋರಿ’ , ‘ತಾಯಿ ಮಗು’ ಎನ್ನುವ ಕೃತಿಗೂ ಇದೆ. ಋತುಸ್ರಾವದಿಂದ ಹಿಡಿದು ಬಾಣಂತನದವರೆಗೆ ಎಲ್ಲವೂ ಪಿಸುಮಾತುಗಳಾಗಿದ್ದಾಗ ವೈಜ್ಞಾನಿಕವಾಗಿ ಅದನ್ನು ಬರೆದು ಒಂದು ತಲೆಮಾರಿಗೆ ಧೈರ್ಯ ಕೊಟ್ಟವರು ಡಾ ಅನುಪಮಾ ನಿರಂಜನ. ಹಾಗೆಯೇ ಶ್ರೀಕಲಾ ಡಿ ಎಸ್ ಅವರೂ ಸಹಾ ನಾಳೆಯ ದಿನಕ್ಕೂ ಸಲ್ಲುವ, ನೆನಪಿಸಿಕೊಳ್ಳುವ ಕೃತಿಯನ್ನು ನಮ್ಮ ಕೈಗಿಟ್ಟಿದ್ದಾರೆ.

ಪತ್ರಕರ್ತೆಯಾಗಿ, ನೃತ್ಯಗಾತಿಯಾಗಿ ಹೆಸರು ಮಾಡಿದ ಶ್ರೀಕಲಾ ಈ ‘ಬಾಳಂತಿ ಪುರಾಣ’ದ  ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಐ ಟಿ -ಬಿ ಟಿ ಯ ಕಾಲದಲ್ಲಿದ್ದರೂ, ಕ್ಷಣಮಾತ್ರಕ್ಕೆ ಜಗತ್ತಿನ ಅನೇಕ ಸಂಗತಿಗಳನ್ನು ಎಳೆದುಕೊಂಡು ಅಂಗೈಯೊಳಗೆ ಕೂರಿಸಿಕೊಳ್ಳುವ ಅವಕಾಶವಿದ್ದರೂ ಹೆಣ್ಣಿನ ಲೋಕ ಮಾತ್ರ ಅರಿವಿನ ಪರಿಧಿಯಿಂದ ಆಚೆಯೇ ಕೂರಿಸಲಾಗಿದೆ. ಆ ಕಾರಣಕ್ಕಾಗಿಯೇ ಶ್ರೀಕಲಾ ಅವರ ಈ ಹೆಜ್ಜೆಗೆ ಮಹತ್ವದ ತೂಕವಿದೆ.

ಶ್ರೀಕಲಾ ಅವರ ಬರಹದಲ್ಲಿ ತುಂಟತನವಿದೆ. ಹೇಳುವುದರಲ್ಲಿ ಸ್ಪಷ್ಟತೆ ಇದೆ. ಆ ಕಾರಣಕ್ಕಾಗಿಯೇ ಈ ಕೃತಿ ಬಾಣಂತನದ ಅರಿವು ಮೂಡಿಸುವ ಒಂದೇ ಕೆಲಸವನ್ನು ನಿರ್ವಹಿಸುತ್ತಿಲ್ಲ. ಲವಲವಿಕೆಯ ಹುಡುಗಿಯೊಬ್ಬಳು ತನ್ನ ಬಾಣಂತನದ ಬರಹಕ್ಕೂ ಅಷ್ಟೇ ಲವಲವಿಕೆಯ ಆಯಾಮ ನೀಡಿದ್ದಾಳೆ. ಶ್ರೀಕಲಾ ಫೇಸ್ ಬುಕ್ ನಲ್ಲಿ ತನ್ನ ಬಾಳಂತನದ ಎರಡು ಬರಹ ಏರಿಸಿದಾಗಲೇ ನನಗೆ ಇದು ನಾವೇ ಪ್ರಕಟಿಸಬೇಕಾದ ಕೃತಿ ಅನಿಸಿಬಿಟ್ಟಿತು. ಅದಕ್ಕೆ ಕಾರಣ ಹಾಗೇನಾದರೂ ನಾವು ಹೆರಿಗೆಯ ಬಗ್ಗೆ ಪುಸ್ತಕ ತರದೇ ಹೋದಲ್ಲಿ ಈ ಕಾಲದ ನೆಟಿಜನ್ ಗಳು ಮಗುವನ್ನೂ ಸಹಾ ಯಾವುದೇ ಆಪ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದೇ ನಂಬಿಬಿಡುವ ಅಪಾಯವಿದೆ ಎಂದು ಗೊತ್ತಿತ್ತು.

ಇರಲಿ, ‘ಅಕದಾಸ ದಂಪತಿ’ ಎಂದೇ ಹೆಸರಾದ ಗಣಪತಿ ಭಟ್ ಮತ್ತು ಮಹಾಂಕಾಳಮ್ಮ ಜೋಡಿ ಮಲೆನಾಡ ಭಾಗದಲ್ಲಿತ್ತು. ಆ ಕಾಲಕ್ಕೆ ನೂರಕ್ಕೂ ವಿಧವೆಯರ ಮರುವಿವಾಹಕ್ಕೆ ದುಡಿದ ಜೀವಗಳು ಅವು. ಒಂದು ಮಹತ್ತರ ಆಂದೋಲನ ರೂಪಿಸಿದವರು. ಅಂತಹ ದಂಪತಿಗಳ ಬಗ್ಗೆ ಬರೆದ, ಅವರ ಹಾದಿಯಲ್ಲೇ ನಡೆದವರು ಲಕ್ಷ್ಮೀನಾರಾಯಣ ಹೆಗಡೆ ಕಲಗಾರು. ಅವರ ಕಾರಣವಾಗಿ ಅವರ ಮಗ ವಿನಾಯಕ ಭಟ್ ಕಲಗಾರು, ಸೊಸೆ ಶ್ರೀಕಲಾ ಹೀಗೆ ಈ ಕೃತಿಯಲ್ಲಿ ಪ್ರಸ್ತಾಪಿಸಿರುವ ಹತ್ತೂ ಸಮಸ್ತರ ಜೊತೆ ನಂಟು ಬೆಸೆಯಲು ಕಾರಣವಾಯಿತು. ಹೀಗೆ ಎರಡೂ ಕಡೆಯ ಕುಟುಂಬಗಳ ಜೊತೆಗಿನ ಆತ್ಮೀಯತೆಯೇ ಈ ಕೃತಿಯನ್ನು ಬರೆದು ಕೊಡಲೇಬೇಕು ಎಂದು ಶ್ರೀಕಲಾರನ್ನು ಒತ್ತಾಯ ಮಾಡುವ ಹಕ್ಕನ್ನು ನನಗೆ ನೀಡಿಬಿಟ್ಟಿತ್ತು.

ಸಾರ್ಥಕ, ಸಂಪನ್ನನ ನಂತರದ ಕೂಸು ಇದು. ದೇಹಕ್ಕೆ ಬಳಲಿಕೆ ನೀಡದ, ಆದರೆ ಮಾನಸಿಕವಾಗು ಸಾಕಷ್ಟು ಸುಸ್ತು ಮಾಡಿ ಹಾಕಿದ ಕೂಸು. ಈ ಕೃತಿಯೂ ಸಂಪನ್ನವಾಗಲಿ ಎನ್ನುವ ಆಶಯದೊಂದಿಗೆ ‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ.. ಎಂದ ಅದೆಷ್ಟೋ ತಾಯಂದಿರ ಆ ಒಡಲ ಪ್ರೀತಿಗೆ ಇದು ‘ಬಹುರೂಪಿ’ಯ ಪುಟ್ಟ ಕಾಣಿಕೆ.

 

ಈತನೊಬ್ಬ ‘ಅಶಾಂತ ಸಂತ’..!

 ‘ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನೇಕೆ ಕೊರೆದಿದ್ದಾರೆ/ ಅಸತ್ಯದ ಕತ್ತಲೇಕೆ ಮನೆ ಮಾಡಿದೆ ಸತ್ಯದ ಬೆಳಕಿನಲ್ಲಿ/ ಸೂರ್ಯನೆ ಹೇಳು ಹೆಪ್ಪುಗಟ್ಟಿದ ಮನಸ್ಸುಗಳನ್ನು ಕರಗಿಸುವುದೆಂತು/ ಮೋಡಗಳೇ ತಿಳಿಸಿ ಮಳೆಯಲ್ಲಿ ಸೇರಿಲ್ಲವೆ ಬಡವರ ಕಣ್ಣೀರು/ ಭವಿಷ್ಯವೇ ತಾಳು ಎಲ್ಲೆಡೆ ಆವರಿಸಿದೆ ನೋವು/ ಪ್ರಳಯಕ್ಕೆ ಮೊದಲು ಎಚ್ಚರಾಗುತ್ತಾರೆ ಅವರು”  ಎಂದಿದ್ದರು ರಂಜಾನ್ ದರ್ಗಾ..
ಹಾಗೆ ಪ್ರಳಯಕ್ಕೆ ಮೊದಲು ಎಚ್ಚರವಾದದ್ದು ಎನ್ ರವಿಕುಮಾರ್. ನಾವೆಲ್ಲರೂ ‘ಟೆಲೆಕ್ಸ್’ ಎಂದೇ ಪ್ರೀತಿಯಿಂದ ಕರೆಯುವ ರವಿಕುಮಾರ್ ಒಂದು ರೀತಿ ಇಂದಿನ ಭಯಾನಕ ಸತ್ಯಗಳ ಟೆಲೆಕ್ಸ್ ಸಂದೇಶವನ್ನು ಎಲ್ಲರಿಗೂ ಕಳಿಸುತ್ತಿರುವುದರ ಗುರುತೇ ಈ ಕವಿತಾ ಸಂಕಲನ.

ಇದು ದುರಿತ ಕಾಲ. ಅಸತ್ಯದ ಕತ್ತಲಲ್ಲಿ ಸತ್ಯ ಮರೆಯಾಗಿ ಹೋಗಿರುವ ಕಾಲ. ಅಂತಹ ಸಮಯದಲ್ಲಿ ಹೆಪ್ಪುಗಟ್ಟಿದ, ಜಡ್ಡುಗಟ್ಟಿದ ಮನಸ್ಸುಗಳನ್ನು ಕರಗಿಸಲು ರವಿಕುಮಾರ್ ತಮ್ಮ ಕವಿತೆಗಳೊಂದಿಗೆ ಎಲ್ಲರೆದುರು ನಿಂತಿದ್ದಾರೆ. ಹುಟ್ಟಿನ ಕಾರಣಕ್ಕಾಗಿ ಅವಮಾನವನ್ನು, ಹಸಿವನ್ನು, ಸಂಕಟವನ್ನು, ಬಡತನವನ್ನೂ ತಲೆಮಾರುಗಳ ಕಾಲ ಹೊದ್ದುಕೊಳ್ಳಬೇಕಾಗಿ ಬಂದಿರುವ ಈ ದಿನಗಳಲ್ಲಿ, ಬಹುತ್ವ ಎನ್ನುವುದೇ ಅಪರಾಧವಾಗಿರುವ ಈ ದಿನಗಳಲ್ಲಿ, ಆಲೋಚನೆ ಎನ್ನುವುದೇ ದೇಶದ್ರೋಹಿತನವಾಗಿರುವ ಈ ದಿನಗಳಲ್ಲಿ ರವಿಕುಮಾರ್ ತಮ್ಮ ‘ನಂಜಿಲ್ಲದ ಪದ’ಗಳನ್ನು ನಮ್ಮ ಮುಂದೆ ಹರಡಿದ್ದಾರೆ.

ರವಿಕುಮಾರ್ ಅಥವಾ ಅವರಂತೆ ಯೋಚಿಸುವವರ ಬಗ್ಗೆ ನಮಗೆ ಭರವಸೆ ಮೂಡುವುದೇ ಅವರು ನಂಜಿನ ಕಾಲಕ್ಕೆ ನಂಜಿಲ್ಲದ ಮಾತುಗಳ ಮುಲಾಮು ಹೊಂದಿದ್ದಾರೆ ಎನ್ನುವ ಕಾರಣಕ್ಕೆ. ಅಂಗುಲಿಮಾಲನ ಎದುರು ಬುದ್ಧನಾಗುವುದು ಸುಲಭವಲ್ಲ. ಅದು ತನ್ನೊಳಗಿನ ಭಯವನ್ನು ಗೆದ್ದ ಪ್ರತೀಕ. ಹಾಗೆ ಗೆದ್ದವರು ಎಷ್ಟಿದ್ದಾರೆ ಎಂದು ಹತಾಶೆ ಆವರಿಸುವ ಸಮಯದಲ್ಲಿ ರವಿಕುಮಾರ್ ಅವರ ಕವಿತೆಗಳು ನಮ್ಮ ಮುಂದೆ ಭರವಸೆಯ ಬೆಳಕಾಗಿ ನಿಲ್ಲುತ್ತವೆ. 
‘ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ, ತಾನೂ ಬದುಕಲೆಂದು.. ಕಾವ್ಯ ಬಂತು ಬೀದಿಗೆ’ ಎನ್ನುವಂತೆ ರವಿಕುಮಾರ್ ಕವಿತೆಗಳು ಕನಸುಗಳ ಹೆರುತ್ತಾ ಕೂರದೆ ಬೀದಿಗೆ ಬಂದು ನಿಂತಿವೆ. ಅಸೀಫಾಳ ಮೇಲಿನ ಅತ್ಯಾಚಾರ, ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಸಾಲು ಸಾಲು ಮಕ್ಕಳ ಸಾವು, ಗೌರಿ ಹತ್ಯೆ, ರೋಹಿತ್ ವೇಮುಲ ಆತ್ಮಹತ್ಯೆ.. ಹೀಗೆ ರವಿಕುಮಾರ್ ಪದ್ಯಗಳು ನೊಂದವರ ಹಿಂದೆ ಸಂಚಾರ ಹೊರಟಿವೆ.

ಇವರ ಕವಿತೆಗಳು ಅಶಾಂತ ಸಂತನಂತೆ ದೇಶದುದ್ದಕ್ಕೂ ತಿರುಗುತ್ತವೆ. ಹೆಣದ ಮೆರವಣಿಗೆಯ ಹಿಂದೆ ಹೊರಟ ಕವಿತೆಗಳು ‘ಬನ್ನಿ ಮಣ್ಣಿಗೋಗೋಣ’ ಎಂದು ಕನಸ ಮರಿ ಹಾಕುತ್ತಾ, ರಂಗ ಮಹಲುಗಳಲ್ಲಿದ್ದವರನ್ನು ಕರೆಯುತ್ತವೆ. ಇವರ ಕವಿತೆಗೆ ಒಡಲಾಳವನ್ನು ಹೊಕ್ಕುವ, ಇನ್ನಿಲ್ಲದಂತೆ ಮನ ಕಲಕುವ ಶಕ್ತಿ ಇದೆ. ಅಬ್ಬರದ ದನಿಗಿಂತ ತಣ್ಣನೆಯ ದನಿಯನ್ನು ಅವರು ಆಯ್ಕುಕೊಳ್ಳುತ್ತಾರೆ. ಹಾಗಾಗಿಯೇ ಗೌರಿ ತನಗೆ ಗುಂಡಿಕ್ಕಿದವನಿಗೆ ‘ನನ್ನೆದೆ, ಹಣೆಗೆ ಗುಂಡಿಕ್ಕುವ ಮುನ್ನ ಅದೆಷ್ಟು ಹಸಿದಿದ್ದೆಯೋ..’ ಎಂದು ಕಳವಳಿಸುತ್ತಾಳೆ. ‘ನನ್ನ ಕೊಂದ ಕತ್ತಿಯನ್ನು ದೇವರ ಕೋಣೆಯಲ್ಲಿಡಿ.. ನಿತ್ಯ ನಿಮ್ಮ ಪರಾಕ್ರಮ ನೆನಪಾಗುತ್ತಿರಲಿ’ ಎನ್ನಲು ಸಾಧ್ಯವಾಗುತ್ತದೆ. 

‘ನೀ ಹೋದ ಮರುದಿನ ಮೊದಲಾಂಗ ನಮ್ಮ ಬದುಕು ಆಗ್ಯಾದೋ ಬಾಬಾಸಾಹೇಬ’ ಎಂದು ರವಿಕುಮಾರ್ ಕೊರಗುತ್ತಾ ಕೂರುವುದಿಲ್ಲ. ಅವರು ಬಾಬಾಸಾಹೇಬನ ಎದುರು ನಿಂತು ಕುಶಲ ವಿಚಾರಿಸುವವರು. ಬಾಬಾಸಾಹೇಬನ ಕಣ್ಣಲ್ಲಿ ನೀರುಕ್ಕಿದ್ದಕ್ಕೆ, ಕೊರಳ ಸೆರೆಯುಬ್ಬಿದ್ದಕ್ಕೆ ‘ಯಾಕಿಷ್ಟು ದುಃಖ ದೊರೆಯೇ?’ ಎಂದು ಕೇಳಬಲ್ಲವರು. ‘ಕಣ್ಣ ಕೆಂಡದಲ್ಲಿ ಹೋಳಿಗೆ ಸುಡುವವರ’ ಜೊತೆ ನಿಲ್ಲುವವರು.

 

ತಮ್ಮ ಕವಿತೆಗಳನ್ನು ರವಿಕುಮಾರ್ ‘ಇವು ನನ್ನ ಬಿಕ್ಕಳಿಕೆಗಳು’ ಎಂದು ಕರೆದುಕೊಳ್ಳುತ್ತಾರೆ. ಇವು ‘ಇಷ್ಟ ಬಂದ ಆಹಾರ ತಿಂದದ್ದಕ್ಕೆ, ಉಡುಗೆ ತೊಟ್ಟಿದ್ದಕ್ಕೆ, ನಕಲಿ ದೇಶಪ್ರೇಮವನ್ನು ಪ್ರಶ್ನಿಸಿದ್ದಕ್ಕೆ’ ತಮ್ಮ ಹತಾರಗಳನ್ನು ಹೊತ್ತು ಬಂದವರ ನಿಲೆ ಹಾಕಿ ಕಣ್ಣಲ್ಲಿ ಕಣ್ಣಿಟ್ಟು ‘ಏನು ಬಂದಿರಿ, ಹದುಳವೇ?’ ಎಂದು ಕೇಳುವ ಶಕ್ತಿಯನ್ನು ಹೊಂದಿವೆ. ಇಲ್ಲಿರುವ ಕವಿತೆಗಳು ನಿಮ್ಮನ್ನೂ ನಿಲೆ ಹಾಕಿ ಕೇಳುತ್ತದೆ ‘ಪ್ರಶ್ನಿಸಿ, ಯಾಕೆ ಸುಮ್ಮನಿದ್ದೀರಿ?’ ಎಂದು. ‘ನಂಜಿಲ್ಲದ ಕವಿತೆ’ಗಳ ಓದಿ ನಂಜುಳ್ಳವರ ಎದುರು ನಿಲ್ಲೋಣ ಬನ್ನಿ.

ಅಮೆರಿಕನ್‌ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು..

ತನ್ನ ಹೆಸರಿನ ಜೊತೆಗೆ ಸಾಕ್ಷಾತ್ ಶ್ರವಣ ಕುಮಾರನಂತೆ ತನ್ನ ತಂದೆ ತಾಯಿಯರ ಹೆಸರನ್ನು ಹೊತ್ತೇ ಸಾಗುವ ಆಕರ್ಷ ಸದಾ ನನ್ನ ಕುತೂಹಲದ ಕೇಂದ್ರ. ಕುಳಿತ ಕಡೆ ಕುಳಿತುಕೊಳ್ಳದ, ಯಾವುದೋ ಒಂದು ಅವಸರದಲ್ಲಿರುವಂತೆ ಹೆಜ್ಜೆ ಹಾಕುವ, ಒಂದೇ ಬಾರಿಗೆ ಎಲ್ಲಾ ಮಾತನ್ನು ಮುಂದೆ ಸುರಿದು ಬಿಡಬೇಕು.. ಎನ್ನುವ ಧಾವಂತದ ಈ ಹುಡುಗನ ಒಳಗೆ ಒಂದು ‘ಗ್ರಾಫಿಟಿಯ ಹೂ’ವಿರಬಹುದು ಎಂದು ನನಗೆ ಗೊತ್ತೇ ಇರಲಿಲ್ಲ.

ಫ್ರಾನ್ಸ್, ಅಮೇರಿಕಾ, ಸ್ವಿಡ್ಜರ್ ಲ್ಯಾಂಡ್ ಗಳಲ್ಲಿ ಉಸಿರಾಡಿ ಬಂದ ಆಕರ್ಷನಿಗೆ ಬದುಕು, ಭಾಷೆ ಎಲ್ಲವೂ ಒಂದು ಗ್ರಾಫಿಟಿಯ ಹೂವಾಗಿಯೇ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಬದುಕಿಗೆ ಗಡಿ ಗೋಡೆಗಳನ್ನು ಕಟ್ಟಿಕೊಳ್ಳದ, ಗ್ರೀನ್ ವಿಚ್ ಮೀನ್ ಟೈಮ್ ನಿಂದ ಸಮಯ ಅಳೆಯದ, ಕಾಫಿ ಕಪ್ಪಿನೊಳಗಿನ ಕಡು ಬಣ್ಣದ ಮೂಲಕ ರುಚಿ ಅಳೆಯದ ಒಂದು ತಲೆಮಾರು ತಲೆ ಎತ್ತಿದೆ.

‘ಸಿಟಿಜನ್’ ಎನ್ನುವ ಕಲ್ಪನೆ ದೂರವಾಗಿ ‘ನೆಟಿಜನ್’ ಎನ್ನುವುದು ವಾಸ್ತವವಾಗುತ್ತಿರುವ ಕಾಲದ ತಲೆಮಾರು ಇದು. ಒಂದು ದೇಶಕ್ಕೆ ಜೋತು ಬೀಳದ, ಒಂದೇ ಭಾಷೆ ಎನ್ನುವುದನ್ನು ಕೀಳರಿಮೆಯಾಗಿ ನೋಡುವ, ಹಲವು ಸಂಸ್ಕೃತಿಯ ಮಿಶ್ರ ಪಾಕದಲ್ಲಿರುವ ತಲೆಮಾರು ನನಗೆ ಸದಾ ಕಾಡುವ ಸಂಗತಿ. ಜಾಗತೀಕರಣ ಹೇಗೆ ಯಾವುದೇ ಕಾಸ್ಮೆಟಿಕ್ಸ್ ಬಳಸದೆ ಎಲ್ಲರ ಬಣ್ಣ ಬದಲಿಸುತ್ತದೆ ಎನ್ನುವುದು ಕ್ರಮೇಣ ನಮ್ಮ ಅಡುಗೆ ಕೋಣೆಗಳಲ್ಲೂ ಬದಲಾಗುತ್ತಿರುವ ಭಾಷೆ, ಊಟ, ಲೋಟ ಎಲ್ಲವೂ ಹೇಳುತ್ತಿವೆ.

ಟೆಕ್ ಲೋಕದ ಏಣಿ ಇಟ್ಟುಕೊಂಡು ಸುಲಭವಾಗಿ ಜಾಗತೀಕರಣದ ‘ಕ್ಲೌಡ್’ನ ಭಾಗವಾಗಿಹೋಗಬಹುದಾದ ಹುಡುಗ ತನ್ನ ಕೈಯಲ್ಲಿ ಕವಿತೆ ಹಿಡಿದು ನಿಂತಿದ್ದಾನೆ. ಎನ್ನುವುದೇ ಒಂದು ಅಚ್ಚರಿಯ ಸಂಗತಿ. ತನ್ನೊಳಗೆ ಓಡಾಡಿದ ನಗರಗಳನ್ನು, ತನ್ನೊಳಗೆ ಹಾದು ಹೋದ ಭಾಷೆಗಳನ್ನು, ತನ್ನೊಳಗೆ ಅಡಗಿ ಕೂತ ಸಂಸ್ಕೃತಿಗಳನ್ನು ತಾನು ಕಳೆದು ಹೋದದ್ದನ್ನು, ತನ್ನ ಅನಾಥಥೆಯನ್ನು ಆಕರ್ಷ ಕವಿತೆಯಾಗಿಸಿದ್ದಾನೆ.

‘ನಿಮ್ಮ ಹೆಸರುಗಳನ್ನೇ ಶೀರ್ಷಿಕೆಯಾಗಿಸಿ ಕವಿತೆಯಾಗಿಸುತ್ತೇನೆ’ ಎನ್ನುತ್ತಾನೆ ಆಕರ್ಷ. ಈ ಕವನ ಸಂಕಲನದಲ್ಲಿ ಓಡಾಡಿದರೆ ಸಾಕು ಜಗತ್ತಿನ ವಿಶಾಲ ಕ್ಯಾನ್ ವಾಸ್ ನಲ್ಲಿ ಕಳೆದು ಹೋಗುವ ಅನುಭವ. ಆತ ಹೇಳಿದಂತೆ ಈ ಸಂಕಲನದಲ್ಲಿನ ಕವಿತೆಗಳಿಗೆ ನಮ್ಮ ಗುರುತನ್ನೇ ಕೊಟ್ಟುಕೊಳ್ಳಬಹುದು.

ಭವಿಷ್ಯದ ಕವಿತೆಗಳು ಚಿಕ್ಕದಾಗಿರುತ್ತವೆ/ ಅವಕ್ಕೆ ಬೃಹತ್ ಬ್ಯಾಟರಿಗಳ ಅಥವಾ ವಿಶಿಷ್ಟ ತಂತುಗಳ ಅವಶ್ಯವಿರುವುದಿಲ್ಲ/ ಭವಿಷ್ಯದ ಕವಿತೆ ತನ್ನನ್ನು ತಾನೇ ಬರೆದುಕೊಳ್ಳುತ್ತದೆ/ ಡಿಜಿಟಲ್ ಪ್ರೋಗ್ರಾಮಿನ ಸಹಾಯದಿಂದ / ತೊಡಕುಗಳಿಲ್ಲದೆ ತಿಂಗಳುಗಟ್ಟಲೆ ಚಲಿಸುತ್ತದೆ/ ಆಧುನಿಕ ವಸ್ತುಗಳಿಂದ / ವಿಶಿಷ್ಟ ಲೋಹಗಳಿಂದ ತಯಾರಿಸಲ್ಪಟ್ಟಿರುತ್ತದೆ/ ಭವಿಷ್ಯದ ಕವಿತೆ ನೂರಾರು ಆಕಾರಗಳಲ್ಲಿ/ ಬಣ್ಣಗಳಲ್ಲಿ ಲಭ್ಯವಿರುತ್ತದೆ… ಎಂದೇ ಅಂದುಕೊಂಡು ಒಳಗೊಳಗೇ ಗಾಬರಿಪಟ್ಟುಕೊಳ್ಳುತ್ತಿದ್ದಾಗ ಆಕರ್ಷನ ಕವಿತೆಗಳು ‘ಅಮೆರಿಕನ್‌ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪಿ’ನಂತೆ ಕಂಡು ನಿರಾಳ ಉಸಿರು ಬಿಡುವಂತೆ ಮಾಡಿದೆ.

ಹೊಸ ತಲೆಮಾರಿನ ಕವಿತೆಗಳು ಹೇಗಿರುತ್ತವೆ ಎನ್ನುವುದು ಗೊತ್ತಾಗಬೇಕಾದರೆ ನೀವೂ ಈ ಗ್ರಾಫಿಟಿಯ ಹೂವನ್ನು ಕೈಗೆತ್ತಿಕೊಳ್ಳಬೇಕು.

ಇಲ್ಲಿ ಪಿಸುಮಾತುಗಳಿವೆ..

ಬಕುಲ ಎಂದೊಡನೆ ನನಗೆ ಕವಿ ಎಕ್ಕುಂಡಿಯವರದ್ದೇ ನೆನಪು.

ನನ್ನೊಳಗೆ, ಓದುಗರೊಳಗೆ ಅವರು ಬಂಕಿಕೊಂಡ್ಲ, ಕಡಲು, ಬೆಳ್ಳಕ್ಕಿ, ಗುಮಟೆ ಪಾಂಗು, ಹಾಲಕ್ಕಿ ಒಕ್ಕಲಿಗರ.. ಅಂತಹವರ ನೋವು ಎಲ್ಲವನ್ನೂ ಸುರಿದರು. ಬೊಚ್ಚು ಬಾಯಿಯ ತುಂಬಾ ನಗೆ ತುಳುಕಿಸುತ್ತಾ, ದೊಡ್ಡ ಕಣ್ಣುಗಳು ಕೆಂಡದುಂಡೆಗಳೇನೋ ಎನ್ನುವಂತೆ ಅವರು ಬಿಚ್ಚಿಟ್ಟ ನೆನಪುಗಳು ನನ್ನ ಒಡಲಲ್ಲಿ ಮನೆ ಮಾಡಿ ಕುಳಿತಿದೆ.

ಹಾಗಿರುವಾಗಲೊಮ್ಮೆ ಅವರನ್ನು ಕೇಳಿದ್ದೆ. ‘ಇಷ್ಟೆಲ್ಲಾ ಬರೆಯಲು ನೀವು ತೊಡಗಿದ್ದು ಹೇಗೆ?’ ಒಂದು ಕ್ಷಣ ಮೌನಕ್ಕೆ ಜಾರಿದ ಅವರು ‘ನನ್ನ ಅಮ್ಮ’ ಎಂದರು. ನಂತರ ನಿಧಾನವಾಗಿ ಸಾವರಿಸಿಕೊಂಡು ‘ಅಮ್ಮ ಹಾಡಿದ ಒಂದು ಹಾಡಿನಿಂದ ನಾನು ಈ ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡೆ’ ಎಂದರು. ಅಮ್ಮನ ಹಾಡು ಅವರಿಗೆ ಜಗತ್ತಿನ ಕದ ತೆರೆದಿತ್ತು.

ಹಾಗೆ ಹೇಳುವಾಗ ಅವರು ಹೇಳುತ್ತಿದ್ದುದು ಹೆಣ್ಣು ಸಾಗಿ ಬಂದ ಸಂಕಟವನ್ನು. ಹಾಗೂ ಆ ಸಂಕಟವನ್ನು ಬಣ್ಣಿಸಲು ಹುಡುಕಿಕೊಳ್ಳುತ್ತಿದ್ದ ದಾರಿಗಳನ್ನು. ಕತ್ತಲ ಲೋಕದಲ್ಲಿ ಅವರು ಧೈರ್ಯದಿಂದ ಬೆಳಕಿಂಡಿಗಳನ್ನು ಬೆನ್ನತ್ತಿ ತಮ್ಮದಾಗಿಸಿಕೊಳ್ಳುತ್ತಿದ್ದರು. ತಮ್ಮ ಕೆಚ್ಚು, ಸ್ವಾಭಿಮಾನ, ಮಮತೆ ಯಾವುದೂ ಮುಕ್ಕಾಗದಂತೆ ನೋಡಿಕೊಳ್ಳುತ್ತಲೇ ಅವರು ಬೆಳಕಿನ ಕಿಟಕಿಗಳನ್ನು ತೆರೆಯುತ್ತಾ ಹೋದರು. ಅವರು ಹಚ್ಚಿದೊಂದು ಹಣತೆ ಈಗ ಎಷ್ಟೋ ಜೀವ ಬೆಳಗಿದೆ.

ಸುಧಾ ಆಡುಕಳ ಅವರಿಗೆ ‘ಅವಧಿ’ಗಾಗಿ ‘ಬಕುಲದ ಬಾಗಿಲಿನಿಂದ’ ಅಂಕಣ ಬರೆಯಿರಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲದಂತೆ ಒಳಗೆ ಸುಳಿದಾಡಿದ್ದು ಇದು. ಬಕುಲದ ನೆಲದಲ್ಲಿ ಬದುಕನ್ನು ಸವೆಸಿದ ಎಕ್ಕುಂಡಿ ಎಷ್ಟೋ ಜೀವನ ಪ್ರೀತಿ ಉಕ್ಕಿಸಿದರು. ಹಲ್ಲು ಕಚ್ಚಿಯಾದರೂ ಬದುಕಬೇಕೆಂಬ ಛಲ ಹೊತ್ತವರ ಅನೇಕ ಕಥೆಗಳನ್ನು ನಮ್ಮ ಮುಂದೆ ಹರಡಿದ್ದರು. ಈಗ ಅದೇ ಬಕುಲದ ನೆಲದಿಂದಲೇ ಬಂದ ಸುಧಾ ಆಡುಕಳ ಅವರು ಬರೆಯಲು ಹೊರಟಾಗ ಇನ್ನೂ ನಾವು ‘ಬಿಚ್ಚಿಲ್ಲದ ಕಟ್ಟಡಗಳು, ಆಲಿಸಬೇಕಾದ ದನಿಗಳನ್ನು’ ಮುಖಾಮುಖಿ ಮಾಡಿಕೊಳ್ಳುವ ತುರ್ತಿದೆ ಎನಿಸಿತ್ತು. ಹಾಗಾಗಿ ಬಕುಲದ ನಾಡಿನಿಂದ ಬಂದ ಹುಡುಗಿ ಈಗ ಮಹಿಳೆಯರ ಅಂತರಂಗ ಹೊಗಲು ಒಂದು ಬಾಗಿಲು ನಿರ್ಮಿಸಿ ಕೊಟ್ಟಿದ್ದಾಳೆ.

ಬಕುಲದ ಬಾಗಿಲಿನಿಂದ- ನೀವು ಹೊಕ್ಕು ನೋಡಲೇಬೇಕಾದ ಲೋಕ. ಇಲ್ಲಿ ನಿಟ್ಟುಸಿರಿದೆ, ನಿಲೆ ಹಾಕಿ ಕೇಳುವ ಧೈರ್ಯವಿದೆ, ಬದುಕಿನ ಬಗ್ಗೆ ಹುಮ್ಮಸ್ಸಿದೆ. ಪ್ರಶ್ನಿಸುವ ಮನಸ್ಸಿದೆ. ಇಲ್ಲಿ ರಾಧೆ, ಕುಂತಿ, ಮಾದ್ರಿ, ಅಂಬೆ, ಅವಧೇಶ್ವರಿಯರಿದ್ದಾರೆ. ಅಂತೆಯೇ ಅಮೃತಾ ಪ್ರೀತಮ್, ಮಾಧವಿ, ಕುಬ್ಜೆ ಮಾಲಿನಿ, ಮಣಿಪುರದ ಚಿತ್ರಾ ಸಹಾ ಇದ್ದಾರೆ. ಸೀತೆ ಹಾಗೂ ಅವಳ ಸಹಚಾರಿಗಳಿದ್ದಾರೆ. ಕಾಯುತ್ತಲೇ ಇರುವ ಊರ್ಮಿಳೆಯರಿದ್ದಾರೆ. ಕಾಣೆಯಾಗುತ್ತಿರುವ ಶಾಂತಲೆಯರಿದ್ದಾರೆ. ಗೊರವನ ಬೆನ್ನಟ್ಟಿದ ಅಕ್ಕ ಇದ್ದಾಳೆ. ಕಲ್ಲಾದ ಅಹಲ್ಯೆಯರಿದ್ದಾರೆ. ಮಧ್ಯರಾತ್ರಿ ಎದ್ದು ಹೋದ ಗೌತಮರನ್ನು ನೋಡಿದ ಅನೇಕ ಯಶೋಧರೆಯರಿದ್ದಾರೆ, ಮೊಲೆಯನ್ನೇ ಕುಯ್ದು ಕೈಗಿಟ್ಟ ನಂಗೇಲಿಯರಿದ್ದಾರೆ. ಶಚೀತೀರ್ಥದಲ್ಲಿ ಉಂಗುರ ಕಳೆದುಕೊಂಡ ಶಕುಂತಳೆಯರಿದ್ದಾರೆ. ಐವರ ಹೆಂಡತಿಯಾಗಿಯೂ ಆತ್ಮ ಸಂಗಾತಕ್ಕೆ ಹಲುಬಿದ ದ್ರೌಪದಿಯರಿದ್ದಾರೆ. ಕತ್ತಲೆಯನ್ನು ಜೀವನದುದ್ದಕ್ಕೂ ಹಾಸಿಕೊಂಡ ಗಾಂಧಾರಿಯರಿದ್ದಾರೆ. ಯೋನಿ ಛೇಧನದ ವಿರುದ್ಧ ಆಂದೋಲನ ಕಟ್ಟಿದ ವಾರಿಸ್ ಗಳಿದ್ದಾರೆ. ಹೊಸ ಋತುಮಾನಕ್ಕೆ ನಾಂದಿ ಹಾಡಿದ ನಂದಿನಿಯರಿದ್ದಾರೆ. ಕವಿ ರವೀಂದ್ರರು ಆ ಕಾಲಕ್ಕೇ ಕೆತ್ತಿಕೊಟ್ಟ ದಿಟ್ಟೆಯರಿದ್ದಾರೆ.

ಈ ಎಲ್ಲರೂ ಇಡೀ ಭೂಮಂಡಲದ ಹೆಣ್ಣುಗಳ ಕಥೆಯನ್ನು ಹೇಳುತ್ತಿದ್ದಾರೆ. ಅವರಿಗೆ ಬಾಯಾಗಿದ್ದಾರೆ.

ಸುಧಾ ಆಡುಕಳ ಎಂಬ ಹಿಡಿ ಜೀವವೊಂದು ನನಗೆ ಅನುದಿನದ ಕೌತುಕ. ಪುಟ್ಟ ಜೀವವೊಂದು ಎಷ್ಟು ದೊಡ್ಡ ನೋಟ ಕಟ್ಟಿಕೊಟ್ಟಿದೆ ಎಂಬ ಹೆಮ್ಮೆ. ಸದ್ದಿಲ್ಲದೇ ತಾನಿದ್ದ ನೆಲವನ್ನು ಉತ್ತು ಹಸನಾಗಿಸುವ, ಸಮೃದ್ಧವಾಗಿಸುವ ಎರೆಹುಳುವಿನಂತೆ ಈಕೆ ಚರಿತ್ರೆ, ಪುರಾಣ, ವರ್ತಮಾನಗಳ ಮೂಲಕ ಮೊಗೆದುಕೊಟ್ಟಿರುವ ಅಂಕಗಳನ್ನು ನೋಡಿ ಮೂಕವಾಗಿದ್ದೇನೆ. ‘ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಜನಕರಾಜನ ಹೊಲದ ಮಣ್ಣು ತರುವೆ…’ ಎಂದು ಎಕ್ಕುಂಡಿ ಹೇಳಿದರೆ ಈಕೆ ಅದನ್ನು ಮಾಡಿಯೇ ತೀರುತ್ತೇನೆ ಎನ್ನುವಂತೆ ಪ್ರತೀ ಪಾತ್ರದ ಕಾಲ, ಲೋಕಕ್ಕೆ ಹೆಜ್ಜೆಯಿಟ್ಟು ಅವರ ಕಥಾನಕಗಳನ್ನು ಕರಡಿಗೆಯಲ್ಲಿ ಹೊತ್ತು ತಂದಿದ್ದಾರೆ.

ಇಲ್ಲಿ ಪಿಸುಮಾತುಗಳಿವೆ. ಅವು ನಾಳೆಗೆ ಗಟ್ಟಿ ದನಿಯಾಗುವ ಮಾತುಗಳು. ಇಲ್ಲಿ ಪಿಸು ಮಾತುಗಳಿವೆ. ಅವು ನಾಳೆ ಕಡಲಿನಂತೆ ಅಬ್ಬರಿಸಬಲ್ಲವು. ಇಲ್ಲಿ ಪಿಸುಮಾತುಗಳಿವೆ. ಅವು ನಿನ್ನೆಯನ್ನು ಇಂದಿನೊಂದಿಗೆ, ಇಂದಿನ ಅನುಭವವನ್ನು ನಾಳೆಯೊಂದಿಗೆ ಬೆಸೆಯಬಲ್ಲವು. ತಣ್ಣನೆಯ ದನಿಯಲ್ಲಿ ಮಾತನಾಡುವ ಇಲ್ಲಿನ ಪಾತ್ರಗಳು ನಾಳೆ ಖಂಡಿತಾ ಕೆಂಡದ ಮಳೆಗೆರೆಯಬಲ್ಲವು.

ಕಾಡು- ನಾಡಿನ ಕನ್ನಡಿ ..

ವಿನೋದ್ ಹಾಗೂ ನಾನೂ ಕೈ ಕುಲಕಬೇಕಾಗಿ ಬಂದದ್ದು ನಟ ಪ್ರಕಾಶ್ ರೈ ಅವರ ಸಮ್ಮುಖದಲ್ಲಿ. ‘ಕನ್ನಡಪ್ರಭ’ ಮತ್ತು ‘ಸುವರ್ಣ ಚಾನಲ್’ನ ಹುಲಿ ಸಂರಕ್ಷಿಸುವ ಅಭಿಯಾನದ ರಾಯಭಾರಿ ಪ್ರಕಾಶ್ ರೈ. ಆ ಇಡೀ ಯೋಜನೆಯನ್ನು ತನ್ನ ಮನೆಕೆಲಸವೇನೋ ಎನ್ನುವಷ್ಟು ಶ್ರದ್ಧೆಯಿಂದ ರೂಪಿಸಿ, ಜಾರಿಗೊಳಿಸಿದವರು ವಿನೋದಕುಮಾರ್ ಬಿ ನಾಯ್ಕ್. ಅವರಿಬ್ಬರೂ ಹುಲಿ ಕಥೆಗಳನ್ನು ಮಾತನಾಡುತ್ತ ಇದ್ದಾಗ ನಾನು ಸುಮ್ಮನೆ ಕಿವಿಯಾಗಿ ಕುಳಿತೆ. ವಿನೋದ್ ತಮ್ಮ ನೆನಪಿನ ಗಣಿಯಿಂದ ಮೊಗೆದು ಕೊಡುತ್ತಿದ್ದ ಕಥೆಗಳಂತೂ ನನ್ನೊಳಗೆ ರೋಮಾಂಚನ ಹುಟ್ಟಿಸುತ್ತಿತ್ತು.

ಮತ್ತೆ ಮತ್ತೆ ಇಂತಹ ಎಷ್ಟೋ ಭೇಟಿಗಳಾದವು. ವಿನೋದ್ ಕಾಡಿನ ಕಥೆಗಳನ್ನು ಹೇಳುತ್ತಲೇ ಇದ್ದರು. ನಾನು ಎಂದಿನಂತೆ ಮಾತು ಆಡುವುದನ್ನು ಬದಿಗಿಟ್ಟು ಕಿವಿಗೆ ಮಾತ್ರ ಕೆಲಸ ಕೊಟ್ಟು ಕೂರುತ್ತಿದ್ದೆ, ಹೀಗಿರುವಾಗ ಯಾವುದೋ ಒಂದು ಕ್ಷಣದಲ್ಲಿ ನನಗೆ ಗೋಚರಿಸಿದ್ದು ವಿನೋದ್ ತಮ್ಮ ಅಷ್ಟೂ ಕಥೆಗಳಲ್ಲಿ ಬರೀ ಕಾಡಿನ ಬಗ್ಗೆ, ಕಾಡಿನ ಉಳಿವಿನ ಬಗ್ಗೆ, ಪ್ರಾಣಿ ಪಕ್ಷಿಗಳ ಕ್ಷೇಮದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ ಅವರು ಕಾಡು ಹಾಗೂ ಮನುಷ್ಯರಿಬ್ಬರ ಕ್ಷೇಮದ ಬಗ್ಗೆಯೂ ಹೇಳುತ್ತಿದ್ದಾರೆ ಎಂದು. ಅಂದಿನಿಂದ ನನ್ನ ಹಾಗೂ ವಿನೋದ್ ನಂಟು ಹೆಚ್ಚುತ್ತಲೇ ಹೋಯಿತು.

ನನಗೆ ‘ಪರಿಸರವೊಂದೇ..’ ಎನ್ನುವ ಪರಿಸರವಾದಿಗಳ ಜೊತೆ ಈ ಮೊದಲಿನಿಂದಲೂ ತಕರಾರಿದೆ. ಅಂತೆಯೇ ವನ್ಯಪ್ರಾಣಿಗಳ ರಕ್ಷಣೆಗೆ ಮಾತ್ರ ಟೊಂಕ ಕಟ್ಟಿ ನಿಂತವರ ಬಗ್ಗೆಯೂ. ಇದಕ್ಕೆ ಕಾರಣವೂ ಇದೆ. ನಾನು ಹಲವು ವರ್ಷಗಳ ಕಾಲ ಜಾನಪದ ಲೋಕದ ಮಹನೀಯರಾದ ಎಚ್ ಎಲ್ ನಾಗೇಗೌಡರೊಂದಿಗೆ, ಎಸ್ ಕೆ ಕರೀಂ ಖಾನ್ ಅವರೊಂದಿಗೆ, ಹಿ ಚಿ ಬೋರಲಿಂಗಯ್ಯ, ಪುರುಷೋತ್ತಮ ಬಿಳಿಮಲೆ ಅವರೊಂದಿದೆ ಕಾಡು ಮೇಡು ಸುತ್ತಿದ್ದೇನೆ. ಈ ನದಿಗೆ ನನಗೆ ಕಲಿಸಿಕೊಟ್ಟದ್ದು ಅಪಾರ. ಮೇಘಾನೆಯಂತ ಎತ್ತರದ ಗುಡ್ಡಗಳಲ್ಲಿ ಇರುವ ಹಸಳರೂ, ಪಶ್ಚಿಮ ಘಟ್ಟದ ಆಳ ಕಣಿವೆಗಳಲ್ಲಿದ್ದ ಮಳೆ ಕುಡಿಯರು, ಕಡಲ ತೀರದಲ್ಲಿರುವ ಹಾಲಕ್ಕಿ ಒಕ್ಕಲಿಗರು..

ನನಗೆ ಕಲಿಸಿದ ಪಾಠಗಳು ಹಲವಾರು. ಆ ನಂತರ ಪಿ ಸಾಯಿನಾಥ್ ಅವರ Everybody loves a good drought ಓದಿದ ನಂತರ, ಅದನ್ನು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಆಗಿ ಅನುವಾದಿಸುವಾಗ ಈ ಪರಿಸರವಾದ ಹೇಗೆ ಮನುಷ್ಯಮುಖಿಯಾಗಿಲ್ಲ ಎನ್ನುವುದು ಮೇಲಿಂದ ಮೇಲೆ ಅರಿವಿಗೆ ಬರತೊಡಗಿತು. ಜೊತೆಗೆ ನಾನು ಪಿ ಸಾಯಿನಾಥ್ ಅವರ ಮಹತ್ವದ ಯೋಜನೆ ‘ಪರಿ’- Peoples Archive of Rural India ದಲ್ಲಿ ತೊಡಗಿಸಿಕೊಂಡ ನಂತರ ಕಾಡೇ ಮನೆಯಾದ ಮನುಷ್ಯರ ಬಗ್ಗೆ, ಕಾಡು ಅವರ ಬದುಕಿನ ರಂಗಸಾಲೆಯಾದ ಬಗ್ಗೆ, ಕಾಡು ಹಾಗೂ ಮನುಷ್ಯನ ಸೌಹಾರ್ದಯುತ ಸಹಬಾಳ್ವೆಯ ಬಗ್ಗೆ, ವನ್ಯಮೃಗಗಳು ಹಾಗೂ ಮನುಷ್ಯನ ಸಹಬಾಳ್ವೆಯ ಬಗ್ಗೆ ಹಲವು ಪಾಠಗಳು ದಕ್ಕುತ್ತ ಹೋದವು.

ಹಾಗಾಗಿಯೇ ನಾನು ಕಾಡು ಪ್ರಾಣಿ ಹಾಗೂ ಮನುಷ್ಯ ಈ ಮೂರರ ಬಗ್ಗೆಯೂ ಒಲವು ಇಟ್ಟುಕೊಂಡವರನ್ನು ಹುಡುಕುತ್ತಿದ್ದೆ. ನಾನು ಬಂಡೀಪುರ ಅರಣ್ಯ ಹೊಕ್ಕಾಗ, ನಾಗರಹೊಳೆಯ ಕಾಡುಗಳಲ್ಲಿ ಅಡ್ಡಾಡಿದಾಗ, ಪಶ್ಚಿಮ ಘಟ್ಟದ ಕಾಡುಗಳನ್ನು ಹೊಕ್ಕಾಗ, ಕಾಳಿ ನದಿಯ ಜುಳು ಜುಳು ನಾದದ ಬೆನ್ನತ್ತಿ ಅದರ ದಂಡೆಗುಂಟ ಹೆಜ್ಜೆ ಹಾಕಿದಾಗ.. ಹೀಗೆ ಎಲ್ಲಾ ಸಮಯದಲ್ಲೂ ಶುದ್ಧ ಪರಿಸರವಾದವನ್ನು ಪ್ರತಿಪಾದಿಸುವ ಮನಸ್ಸುಗಳೇ ಕಂಡವು. ಹಾಗಾಗಿಯೇ ವಿನೋದಕುಮಾರ್ ನಾಯ್ಕ್ ಮಾತನಾಡುವಾಗ ನನಗೆ ತಕ್ಷಣ ಇವರು ಭಿನ್ನ ಎನಿಸಿದ್ದು. ಅವರ ಮಾತಿನಲ್ಲಿ ಮನುಷ್ಯನಿಗೂ ಒಂದು ಜಾಗವಿತ್ತು.

ಆ ನಂತರ ವಿನೋದ್ ಹಾಗೂ ನಾನು ಲೆಕ್ಕವಿಲ್ಲದಷ್ಟು ಬಾರಿ ಭೇಟಿಯಾಗಿದ್ದೇವೆ. ಅವರಿಂದ ನೇರವಾಗಿ ನೂರೆಂಟು ಕಥೆಗಳನ್ನು ಕೇಳಿ ಅಚ್ಚರಿಗೊಂಡಿದ್ದೇನೆ. ವಿನೋದ್ ಪಕ್ಷಿಗೆ ಕಲ್ಲೆಸೆದು ನಂತರ ಆ ಪಕ್ಷಿ ಸೈಬೀರಿಯಾದಿಂದ ಸಾವಿರಾರು ಮೈಲು ಹಾರಿ ಬಂದದ್ದು ತಿಳಿದು ಕಲ್ಲನ್ನು ಬದಿಗಿಟ್ಟು ಪಕ್ಷಿಪ್ರೇಮಿಯಾದವರು, ನಂತರ ಮೃಗಾಲಯದಲ್ಲಿ ಪ್ರಾಣಿಗಳ ಒಡನಾಟ, ಗೆಳೆಯರೊಂದಿಗೆ ಕಾಡಿನ ಓಡಾಟ ಇವರನ್ನು ಸಂಪೂರ್ಣ ಬದಲಿಸಿತು.

ಅವರು ತಮ್ಮ ಅನುಭವಗಳನ್ನು ತಾವಿದ್ದೆಡೆಯೆಲ್ಲಾ ಹೊತ್ತು ಸಾಗಿದ್ದಾರೆ. ಹಾಗಾಗಿ ಪತ್ರಿಕೆ, ಟೆಲಿವಿಷನ್ ಗೆ ಕಾಲಿಟ್ಟಾಗಲೂ ಅವರ ವನ್ಯ ಪ್ರೇಮವನ್ನು ಹೊತ್ತೇ ತಂದಿದ್ದಾರೆ. ವಿನೋದಕುಮಾರ್ ಅಪರೂಪದ ಪತ್ರಕರ್ತ. ವನ್ಯಜೀವಿ ಕ್ಷೇತ್ರದಲ್ಲಿ ಪರಿಣಿತಿ ಪಡೆದ ಪತ್ರಕರ್ತರು ಇಲ್ಲವೇ ಇಲ್ಲ ಎನ್ನಬಹುದು. ಅವರು ಕಾಡು ಮತ್ತು ನಾಡಿಗೆ ಕನ್ನಡಿ ಹಿಡಿದ ಕಾರಣಕ್ಕಾಗಿಯೇ ನನಗೆ ಇಷ್ಟ. ಪ್ರಾಣಿಗಳೆಲ್ಲಾ ನಾಡಿಗೆ ನುಗ್ಗುತ್ತಿರುವ ವೇಳೆಯಲ್ಲಿ ಕಾಡು ಹೊಕ್ಕವರು ವಿನೋದಕುಮಾರ್ ನಾಯ್ಕ್. ಕಾಡಿನ ಬದುಕು, ಅಲ್ಲಿನ ಕಲರವ, ಅಲ್ಲಿನ ಬದಲಾಗುತ್ತಿರುವ ಬದುಕು, ಅಲ್ಲಿನ ಸಂಕಟ ತೊಳಲಾಟ ಎಲ್ಲವನ್ನೂ ಬಲ್ಲ ವಿನೋದ್ ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ಪತ್ರಕರ್ತ.

ಪತ್ರಿಕೋದ್ಯಮ ಎನ್ನುವುದು ಅಧಿಕಾರದ ಗದ್ದುಗೆಯ ಸುತ್ತಾ ಗಿರಕಿ ಹೊಡೆಯುತ್ತಿರುವ ಈ ದಿನಗಳಲ್ಲಿ ವಿನೋದ್ ಕಾಡು- ನಾಡಿಗೆ ಕೊಂಡಿಯಾಗಿದ್ದಾರೆ. ‘ಕನ್ನಡಪ್ರಭ’ ಪತ್ರಿಕೆಯಲ್ಲಿ ‘ಜಂಗಲ್ ಡೈರಿ’ ಹೆಸರಿನಲ್ಲಿ ಪ್ರಕಟವಾದ ಅಂಕಣ ಬರಹಗಳನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದನ್ನು ಓದಿ ಮುಗಿಸುವ ವೇಳೆಗೆ ನಿಮಗೂ ಚಂದ್ರಶೇಖರ ಕಂಬಾರರು ಬಣ್ಣಿಸಿದಂತೆ ‘ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ..’ ಎಂದು ನಿಮಗೂ ಅನಿಸದಿದ್ದರೆ ಕೇಳಿ..

 

ಇದು ‘ಮಾವಲಿ ಮಿರ್ಚಿ’

ನಾನು ಮತ್ತು ಶಿವಕುಮಾರ ಮಾವಲಿ ಕೈಕುಲುಕಿದ್ದು ಒಂದು ಹೆಸರಿನ ಮೂಲಕ ಎಂದರೆ ನೀವು ನಂಬಬೇಕು! ‘ದೇವರು ಅರೆಸ್ಟ್ ಆದ’ ಎನ್ನುವ ಹೆಸರಿನ ಕಥಾ ಸಂಕಲನ ಸಾದರ ಸ್ವೀಕಾರಗಳಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ನಿಂತು ಮತ್ತೆ ಆ ಹೆಸರನ್ನು ಓದಿಕೊಂಡಿದ್ದೆ. ಬರೆದವರ ಹೆಸರಿಗಿಂತಲೂ ಕಥಾ ಸಂಕಲನದ ಹೆಸರು ಹಿಡಿದು ಜಗ್ಗಿತ್ತು. ಆಮೇಲೆ ನಮ್ಮ ‘ಅವಧಿ’ಯಲ್ಲೇ ಪ್ರಕಟವಾದ ಪಿ ಚಂದ್ರಿಕಾ ಅವರ ‘ಚಿಟ್ಟಿ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಶಿವಕುಮಾರ ಮಾವಲಿ ಬಂದು ತಮ್ಮನ್ನು ಪರಿಚಯಿಸಿಕೊಂಡಾಗ ನನಗೆ ಗೊತ್ತಿಲ್ಲದಂತೆ ‘ದೇವರು ಅರೆಸ್ಟ್ ಆದ’ ಎನ್ನುವ ಉದ್ಘಾರ ಹೊರಬಿದ್ದಾಗಿತ್ತು.

ಹಾಗೆ ಪರಿಚಯವಾದ ಮಾವಲಿ ಅವರನ್ನು ಬಲವಂತವಾಗಿ ಅರೆಸ್ಟ್ ಮಾಡಿ ‘ಅವಧಿ’ಯ ಅಂಗಳದಲ್ಲಿ ಕೂಡಿಸಿದೆ. ಅದರ ಪರಿಣಾಮವೇ ಅವರ ಈ ಕಥಾ ಸಂಕಲನ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’.

ಶಿವಕುಮಾರ ಮಾವಲಿ ಅವರಿಗೆ ಅಂಕಣ ಬರೆಯಿರಿ ಎಂದೆ. ಅವರು ಕಥೆ ಬರೆದರು. ‘ಮಾವಲಿ ಮಿರ್ಚಿ’ ಎನ್ನುವ ಹೆಸರಿನಲ್ಲಿ ಆರಂಭವಾದ ಅಂಕಣ ಬೇಕಿದ್ದವರಿಗೆ ಕಥೆ ಅನಿಸಿತು, ಉಳಿದವರಿಗೆ ಅಂಕಣ ಎಂದೇ ಅನಿಸಿತು. ಆ ರೀತಿ ಕಥೆಯ ವಿನ್ಯಾಸವನ್ನು ಮುರಿದು ಕಟ್ಟುತ್ತಿರುವವರ ಪೈಕಿ ಮಾವಲಿ ಮುಖ್ಯರು. ಒಂದು ತಲೆಮಾರು ಎನ್ನುವುದು ಈಗ ದೊಡ್ಡ ಕಾಲವೇನಲ್ಲ. ಮಾಧ್ಯಮಗಳ ನಾಗಾಲೋಟದಿಂದ, ಜಾಗತೀಕರಣದ ರಭಸ ಸೆಳೆತದಿಂದ ಆಲೋಚನೆ, ಬದುಕಿನ ವಿಧಾನ ಪರದೆಯ ಮೇಲಿನ ಗೊಂಬೆ ಸರಿದಷ್ಟೇ ವೇಗದಲ್ಲಿ ಸರಿಯುತ್ತಿದೆ. ಅಂತಹ ಜಗತ್ತೇ ತಮ್ಮ ಮನೆ ಎಂದು ಭಾವಿಸಿದ, ಒಂದು ನೆಲೆ ಎನ್ನುವುದನ್ನೇ ನಿರಾಕರಿಸುತ್ತಿರುವ ತಲೆಮಾರು ಯೋಚಿಸುತ್ತಿರುವ ರೀತಿ, ಬದುಕುತ್ತಿರುವ ವಿಧಾನ ಕ್ರಮೇಣ ಸೃಜನಶೀಲ ಕೃತಿಗಳಲ್ಲೂ ತಮ್ಮ ನೆಲೆ ಕಂಡುಕೊಳ್ಳುತ್ತಿವೆ.

ಶಿವಕುಮಾರ ಮಾವಲಿ ಅವರಿಗೆ ಇರುವ ಗ್ರಹಣ ಶಕ್ತಿ ವಿಶಿಷ್ಟವಾದದ್ದು. ಅವರು ತಮ್ಮ ಇಡೀ ಮೈಗೆ ಕಣ್ಣುಗಳನ್ನು ಹಚ್ಚಿಕೊಂಡಿದ್ದಾರೇನೋ ಎನ್ನುವಂತೆ ಸುತ್ತಲಿನ ಎಲ್ಲವನ್ನೂ ಗಮನಿಸುತ್ತಾರೆ. ಹಾಗೆ ಗಮನಿಸಿದ್ದು ಇವರೊಳಗೆ ಬಿದ್ದ ಬೀಜಗಳೇನೋ ಎನ್ನುವಂತೆ ಕುಡಿಯೊಡೆದು ಕಥೆಗಳಾಗಿ ಅರಳುತ್ತವೆ. ಇಂದಿನ ಮಾಧ್ಯಮ, ಇಂದಿನ ಜನಾಂಗ, ಇಂದಿನ ಆಲೋಚನೆಯನ್ನು ಅವರು ಇಲ್ಲಿನ ಕಥೆಗಳಲ್ಲಿ ಕಟ್ಟಿಕೊಟ್ಟಿರುವ ಬಗೆ ಬಹುಷಃ ಕ್ರಮೇಣ ಕಥೆಗಳ ವಿಧಾನವನ್ನು ಭಿನ್ನ ದಿಕ್ಕಿಗೆ ಕೊಂಡೊಯ್ಯಬಲ್ಲವು.

ಶಿವಕುಮಾರ ಮಾವಲಿ ಅವರೊಳಗೊಬ್ಬ ಪುಟಿಯುವ ತುಂಟನಿದ್ದಾನೆ. ಉತ್ಸಾಹದ ಬುಗ್ಗೆಯಿದೆ. ಹಾಗಾಗಿಯೇ ಮಾವಲಿ ಅವರ ಕಥೆಗಳಿಗೆ ವಿಶಿಷ್ಟ ಆಯಾಮ ಸಿಕ್ಕಿಹೋಗುತ್ತದೆ. ಅವರು ಕಥೆಯನ್ನು ಕಟ್ಟುತ್ತಾರೋ ಇಲ್ಲವೇ ಎದುರಿಗಿದ್ದುದನ್ನೇ ಕಥೆಯಾಗಿ ತಿದ್ದಿಬಿಡುತ್ತಾರೋ ಎಂದು ವಿಸ್ಮಯಪಡುವಂತೆ ನಮ್ಮ ಆಜುಬಾಜಿನಲ್ಲಿ ನಡೆಯುವ ಪ್ರತಿಯೊಂದಕ್ಕೂ ತಮ್ಮ ಸ್ಪರ್ಶ ನೀಡುತ್ತಾರೆ.

ಶಿವಕುಮಾರ ಮಾವಲಿ ಸಾಕಷ್ಟು ವರ್ಷಗಳಿಂದ ರಂಗಭೂಮಿಯ ಸಖ್ಯ ಹೊಂದಿರುವವರು. ಜೊತೆಗೆ ಪತ್ರಿಕೋದ್ಯಮವನ್ನು ಸನಿಹದಿಂದ ಕಂಡವರು. ಇದೇ ಕಾರಣಕ್ಕೂ ಇರಬಹುದು ಅವರ ಕಥೆಗಳಿಗೆ ನಾಟಕೀಯ ತಿರುವು ಸಿಕ್ಕುತ್ತದೆ. ನಾಟಕೀಯ ಎಳೆಗಳು ಕಥೆಯಾಗಿ ಮೈ ಬದಲಿಸುತ್ತವೆ. ಅಂದಂದಿನ ವಿದ್ಯಮಾನಗಳು ಇವರೊಳಗೆ ಓಲಾಡಿ ಕಥೆಯಾಗಿ ಎದ್ದು ನಿಲ್ಲುತ್ತವೆ.

ಶಿವಕುಮಾರ ಮಾವಲಿ ಅವರು ಇಂದಿನ ಕಾಲದ ಕಥನಕಾರ ಎಂದರೂ ತಪ್ಪಿಲ್ಲ. ಇವರ ಕಥೆಗಳು ಕಥೆಗಳನ್ನು ಮಾತ್ರ ಮುಂದಿಡುತ್ತಿಲ್ಲ ಬದಲಿಗೆ ಇಂದಿನ ಕಾಲದ ಉಸಿರಾಟವನ್ನು ನಮಗೆ ದಾಟಿಸುತ್ತಿವೆ. ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಶಿವಕುಮಾರ ಮಾವಲಿ ಎಂಬ ನಿಂತ ನೀರಲ್ಲದ ಮನಕ್ಕೆ ಕೈಯಿಟ್ಟ ಕಡೆಯೆಲ್ಲಾ ಕಥೆ ಎಂಬ ಅಕ್ಷಯ ಪಾತ್ರೆ.