ವಿವೇಕ ರೈ ಎಂಬ ಅಕ್ಕರೆ..!

ಪ್ರೊ.ಬಿ.ಎ.ವಿವೇಕ ರೈ ಅವರಿಗೆ ಈಗ ಭರ್ತಿ 72 ವಸಂತ. ಖಂಡಿತವಾಗಿಯೂ ವಸಂತವೇ. ಅವರ ಬದುಕೇ ಹಾಗೆ.. ಸಂಭ್ರಮವನ್ನು ಹಂಚುವ, ನೆರಳನ್ನು ನೀಡುವ ವಸಂತದ ಹಾಗೆ. ನಾನು ಹಾಗೆ ಖಚಿತವಾಗಿ ಹೇಳಲು ಸಾದ್ಯವಾಗಿರುವುದು ಅವರ ಬದುಕಿನ ಇಷ್ಟು ವರ್ಷಗಳಲ್ಲಿ ಸರಿಸುಮಾರು ಅರ್ಧಕಾಲ ಅವರ ಜೊತೆ ಹೆಜ್ಜೆ ಹಾಕಿದ್ದೇನೆ ಎಂಬ ಕಾರಣಕ್ಕೆ.

1992ರಲ್ಲಿ ನಾನು ‘ಪ್ರಜಾವಾಣಿ’ಯ ವರದಿಗಾರನಾಗಿ ಕಡಲನಗರಿಗೆ ಕಾಲಿಟ್ಟಾಗಿನಿಂದ ಇವರ ಜೊತೆಗಿನ ನಂಟು ಗಾಢವಾದರೂ ಇವರ ಜೊತೆ ನಾನು ಕೈ ಕುಲುಕಿದ್ದು 1984ರಲ್ಲಿ. ಮಂಗಳಗಂಗೋತ್ರಿಯಲ್ಲಿ ಇವರು ನಡೆಸಿದ ವಿಚಾರಸಂಕಿರಣದಲ್ಲಿ. ತೇಜಸ್ವಿ ಹಾಗೂ ವಿವೇಕ ರೈ ಅವರನ್ನು ನೋಡಬೇಕೆಂದೇ ಬೆಂಗಳೂರಿನಿಂದ ಬಸ್ಸು ಹತ್ತಿ ಹೋಗಿದ್ದು ನಾನು ಮತ್ತು ಆರ್.ಜಿ.ಹಳ್ಳಿ ನಾಗರಾಜ್. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಜಿ.ಎಸ್.ಶಿವರುದ್ರಪ್ಪನವರು ಹೇಗೋ ಮಂಗಳೂರಿಗೆ ಪ್ರೊ.ವಿವೇಕ ರೈ. ತಾವಿದ್ದ ಕಡೆ ಸಾಹಿತ್ಯದ ಘಮ ಹರಡುವ, ಪ್ರತಿಯೊಬ್ಬರ ಬೆನ್ನಿಗೂ ಇದ್ದೇನೆ ಎನ್ನುವ ಆತ್ಮವಿಶ್ವಾಸ ನೀಡುವ, ತಮ್ಮೊಳಗನ್ನು ಶೋಧಿಸಿಕೊಳ್ಳಲು ಅವಕಾಶ ಮಾಡಿಕೊಡುವ, ಸಕಾರಾತ್ಮಕವಾಗಿ ಯೋಚಿಸುವುದಕ್ಕೆ ದಾರಿ ಮಾಡಿಕೊಡುವ ಗುಣ ಇವರದ್ದು.

‘ಪ್ರೀತಿಯ ಕರೆ ಕೇಳಿ / ಆತ್ಮನ ಮೊರೆ ಕೇಳಿ / ನೀ ಬಂದು ನಿಂದಿಲ್ಲಿ ದೀಪ ಹಚ್ಚಾ….ಎಂದ ಎಸ್.ವಿ.ಪರಮೇಶ್ವರ್ ಭಟ್ ಅವರು ಕಟ್ಟಿದ ಕನ್ನಡ ವಿಭಾಗವನ್ನು ಇನ್ನಷ್ಟು ಹೊಸ ದಿಕ್ಕುಗಳಿಗೆ ಹರಡುವಂತೆ ಮಾಡಿರುವವರು, ಅಲ್ಲಿ ನಿಂತು ದೀಪ ಹಚ್ಚಿದವರು ಪ್ರೊ ಬಿ ಎ  ವಿವೇಕ ರೈ. ಹಾಮಾನಾ ಅವರ ಮಾರ್ಗದರ್ಶನದಲ್ಲಿ ವಿವೇಕ ರೈ ಅವರು ನಡೆಸಿದ ಪಿ ಎಚ್ ಡಿ ಸಂಶೋಧನೆ ‘ತುಳು ಜಾನಪದ’ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಮ್ಮೆಲ್ಲರನ್ನೂ ತಲುಪಿತ್ತು. ತುಳುವಿನ ಬಗ್ಗೆ ಅದರ ಸಂಸ್ಕೃತಿಯ ಬಗ್ಗೆ  ಸಮರ್ಥವಾಗಿ ಮಾತನಾಡಬಲ್ಲ, ಅದಕ್ಕೆ ಹೊಸ ಕಣ್ಣೋಟ ನೀಡಬಲ್ಲ ವಿವೇಕ ರೈ ನಮ್ಮ ಒಳಗೆ ನಡೆದು ಬಂದದ್ದು ಹೀಗೆ. ಆ ನಂತರ ಅವರ ಗಿಳಿಸೂವೆ, ಇರುಳ ಕಣ್ಣು ಅಂಕಣ ಬರಹಗಳು ನಮಗೆ ಜಗತ್ತನ್ನು ನೋಡುವ ಇನ್ನೊಂದು ಬಗೆಯನ್ನೇ ಕಲಿಸಿತು.

ಪ್ರೊ ಬಿ ಎ ವಿವೇಕ ರೈ ಅವರು ಹಾಕಿರುವ 72 ಹೆಜ್ಜೆಗಳು ನನಗೆ ಮಾದರಿ. ಅವರ ನಿಷ್ಕಲ್ಮಷ ಮನಸ್ಸು, ಸದಾ ಹೊಸತನ್ನು ಕಲಿಯುವ ಅವರ ತುಡಿತ, ಸಮಾಜದ ಒಳಿತಿನ ಬಗೆಗಿನ ಕಳಕಳಿ ನನ್ನನ್ನು ನಮ್ರನನ್ನಾಗಿಸಿದೆ. ಶಿವರಾಮ ಕಾರಂತರು ‘ವಿವೇಕ’ ಎನ್ನುವ ಹೆಸರು ಸೂಚಿಸಿದ್ದರಿಂದ ಅವರಿಗೆ ಈ ವಿವೇಕ ಪ್ರಾಪ್ತವಾಯಿತೋ ಇಲ್ಲವೇ ಅವರಲ್ಲಿನ ವಿವೇಕವನ್ನು ಮನಗಂಡೇ ಅವರು ಆ ಹೆಸರು ಸೂಚಿಸಿದರೋ ಗೊತ್ತಿಲ್ಲ. ಅವರು ವಿವೇಕವಂತರು ಎನ್ನುವುದನ್ನು ಜಗತ್ತು ಕಂಡುಕೊಂಡಿದೆ.

ವಿವೇಕ ರೈ ಅವರ ಹೆಜ್ಜೆ ಗುರುತುಗಳನ್ನು ಹಿಡಿದಿಡುವ ಪುಟ್ಟ ಪ್ರಯತ್ನ ಈ ‘ಅಕ್ಕರ ಮನೆ’, ಇಲ್ಲಿ ಅವರು ಬರೆದ ಮೊದಲ ಕಥೆ, ಮೊದಲ ಪ್ರಬಂಧ, ಮೊದಲ ಹಾಡಿನಿಂದ ಹಿಡಿದು ಅವರು ಈಗ ಬರಿಯುತ್ತಿರುವ ಅತ್ಯಂತ ಜನಪ್ರಿಯ ‘ಉದಯವಾಣಿ’ ಅಂಕಣದವರೆಗಿನ ಬರಹಗಳಿವೆ. ಒಂದು ರೀತಿಯಲ್ಲಿ ಇವು ವಿವೇಕ ರೈ ಅವರ ಬರಹ ಲೋಕದ ಹೆಜ್ಜೆ ಗುರುತುಗಳ ಲೋಕ, ತುಳು ಗಾದೆ, ಒಗಟು, ಫೇಸ್‍ಬುಕ್ ಬರಹ, ಅಂಕಣ, ಮುನ್ನುಡಿ, ಅನುವಾದ, ಚಿತ್ರಗೀತೆ, ವ್ಯಕ್ತಿಚಿತ್ರ, ವಿಶ್ಲೇಷಣೆ, ಚುಟುಕುಗಳು ಎಲ್ಲವೂ ಇವೆ.

72 ತುಂಬಿದ ವಿವೇಕ ರೈ ಅವರನ್ನು ಇನ್ನಷ್ಟು ಆಪ್ತವಾಗಿಸಿಕೊಳ್ಳಲು ಈ ‘ಅಕ್ಕರ ಮನೆ’ ಒಂದು ಪುಟ್ಟ ಪ್ರಯತ್ನ. ವಿವೇಕ ರೈ ಅವರ ಕಾರ್ಯಕ್ಷೇತ್ರ ಎಷ್ಟು ವಿಸ್ತಾರವಾಗಿತ್ತು ಹಾಗೂ ಎಷ್ಟು ವೈವಿಧ್ಯಮಯವಾಗಿತ್ತು ಎನ್ನುವುದಕ್ಕೆ ಇದು ಪುಟ್ಟ ಕೈಗನ್ನಡಿ. ಬದುಕಿನ ಪ್ರತಿಯೊಂದರ ಬಗ್ಗೆಯೂ ಅವರಿಗಿರುವ ಆಸಕ್ತಿ, ಪ್ರತಿಯೊಂದಕ್ಕೂ ಅಪ್ಡೇಟ್ ಆಗುವ ಗುಣವನ್ನು ಈ ಕೃತಿ ನಮಗೆ ಸದ್ದಿಲ್ಲದಂತೆ ಮನವರಿಕೆ ಮಾಡಿಕೊಡುತ್ತದೆ.

‘ಬಾಳೆಗಿಡ ಗೊನೆ ಹಾಕಿತು’ ಎನ್ನುವುದು ಬಿ ಎಂ ಬಷೀರ್ ಅವರ ಕಥಾ ಸಂಕಲನ. ಯಾಕೋ ಈ ರೂಪಕ ಈಗ, ಈ ಕೃತಿ ಹೊರಬರುತ್ತಿರುವ ಸಂಧರ್ಭದಲ್ಲಿ ನನ್ನನ್ನು ಮೇಲಿಂದ ಮೇಲೆ ಕಾಡುತ್ತಿದೆ. ವಿವೇಕ ರೈ ಎಂಬ ಬಾಳೆಗಿಡ ಎಷ್ಟೊಂದು ಪ್ರತಿಭೆಗಳ ಗೊನೆಗೆ ಕಾರಣವಾಗಿದೆ ಎನ್ನುವುದು ನನ್ನ ಅಚ್ಚರಿ.

 

 

Leave a comment