ಇದು ‘ಮಾವಲಿ ಮಿರ್ಚಿ’

ನಾನು ಮತ್ತು ಶಿವಕುಮಾರ ಮಾವಲಿ ಕೈಕುಲುಕಿದ್ದು ಒಂದು ಹೆಸರಿನ ಮೂಲಕ ಎಂದರೆ ನೀವು ನಂಬಬೇಕು! ‘ದೇವರು ಅರೆಸ್ಟ್ ಆದ’ ಎನ್ನುವ ಹೆಸರಿನ ಕಥಾ ಸಂಕಲನ ಸಾದರ ಸ್ವೀಕಾರಗಳಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ನಿಂತು ಮತ್ತೆ ಆ ಹೆಸರನ್ನು ಓದಿಕೊಂಡಿದ್ದೆ. ಬರೆದವರ ಹೆಸರಿಗಿಂತಲೂ ಕಥಾ ಸಂಕಲನದ ಹೆಸರು ಹಿಡಿದು ಜಗ್ಗಿತ್ತು. ಆಮೇಲೆ ನಮ್ಮ ‘ಅವಧಿ’ಯಲ್ಲೇ ಪ್ರಕಟವಾದ ಪಿ ಚಂದ್ರಿಕಾ ಅವರ ‘ಚಿಟ್ಟಿ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಶಿವಕುಮಾರ ಮಾವಲಿ ಬಂದು ತಮ್ಮನ್ನು ಪರಿಚಯಿಸಿಕೊಂಡಾಗ ನನಗೆ ಗೊತ್ತಿಲ್ಲದಂತೆ ‘ದೇವರು ಅರೆಸ್ಟ್ ಆದ’ ಎನ್ನುವ ಉದ್ಘಾರ ಹೊರಬಿದ್ದಾಗಿತ್ತು.

ಹಾಗೆ ಪರಿಚಯವಾದ ಮಾವಲಿ ಅವರನ್ನು ಬಲವಂತವಾಗಿ ಅರೆಸ್ಟ್ ಮಾಡಿ ‘ಅವಧಿ’ಯ ಅಂಗಳದಲ್ಲಿ ಕೂಡಿಸಿದೆ. ಅದರ ಪರಿಣಾಮವೇ ಅವರ ಈ ಕಥಾ ಸಂಕಲನ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’.

ಶಿವಕುಮಾರ ಮಾವಲಿ ಅವರಿಗೆ ಅಂಕಣ ಬರೆಯಿರಿ ಎಂದೆ. ಅವರು ಕಥೆ ಬರೆದರು. ‘ಮಾವಲಿ ಮಿರ್ಚಿ’ ಎನ್ನುವ ಹೆಸರಿನಲ್ಲಿ ಆರಂಭವಾದ ಅಂಕಣ ಬೇಕಿದ್ದವರಿಗೆ ಕಥೆ ಅನಿಸಿತು, ಉಳಿದವರಿಗೆ ಅಂಕಣ ಎಂದೇ ಅನಿಸಿತು. ಆ ರೀತಿ ಕಥೆಯ ವಿನ್ಯಾಸವನ್ನು ಮುರಿದು ಕಟ್ಟುತ್ತಿರುವವರ ಪೈಕಿ ಮಾವಲಿ ಮುಖ್ಯರು. ಒಂದು ತಲೆಮಾರು ಎನ್ನುವುದು ಈಗ ದೊಡ್ಡ ಕಾಲವೇನಲ್ಲ. ಮಾಧ್ಯಮಗಳ ನಾಗಾಲೋಟದಿಂದ, ಜಾಗತೀಕರಣದ ರಭಸ ಸೆಳೆತದಿಂದ ಆಲೋಚನೆ, ಬದುಕಿನ ವಿಧಾನ ಪರದೆಯ ಮೇಲಿನ ಗೊಂಬೆ ಸರಿದಷ್ಟೇ ವೇಗದಲ್ಲಿ ಸರಿಯುತ್ತಿದೆ. ಅಂತಹ ಜಗತ್ತೇ ತಮ್ಮ ಮನೆ ಎಂದು ಭಾವಿಸಿದ, ಒಂದು ನೆಲೆ ಎನ್ನುವುದನ್ನೇ ನಿರಾಕರಿಸುತ್ತಿರುವ ತಲೆಮಾರು ಯೋಚಿಸುತ್ತಿರುವ ರೀತಿ, ಬದುಕುತ್ತಿರುವ ವಿಧಾನ ಕ್ರಮೇಣ ಸೃಜನಶೀಲ ಕೃತಿಗಳಲ್ಲೂ ತಮ್ಮ ನೆಲೆ ಕಂಡುಕೊಳ್ಳುತ್ತಿವೆ.

ಶಿವಕುಮಾರ ಮಾವಲಿ ಅವರಿಗೆ ಇರುವ ಗ್ರಹಣ ಶಕ್ತಿ ವಿಶಿಷ್ಟವಾದದ್ದು. ಅವರು ತಮ್ಮ ಇಡೀ ಮೈಗೆ ಕಣ್ಣುಗಳನ್ನು ಹಚ್ಚಿಕೊಂಡಿದ್ದಾರೇನೋ ಎನ್ನುವಂತೆ ಸುತ್ತಲಿನ ಎಲ್ಲವನ್ನೂ ಗಮನಿಸುತ್ತಾರೆ. ಹಾಗೆ ಗಮನಿಸಿದ್ದು ಇವರೊಳಗೆ ಬಿದ್ದ ಬೀಜಗಳೇನೋ ಎನ್ನುವಂತೆ ಕುಡಿಯೊಡೆದು ಕಥೆಗಳಾಗಿ ಅರಳುತ್ತವೆ. ಇಂದಿನ ಮಾಧ್ಯಮ, ಇಂದಿನ ಜನಾಂಗ, ಇಂದಿನ ಆಲೋಚನೆಯನ್ನು ಅವರು ಇಲ್ಲಿನ ಕಥೆಗಳಲ್ಲಿ ಕಟ್ಟಿಕೊಟ್ಟಿರುವ ಬಗೆ ಬಹುಷಃ ಕ್ರಮೇಣ ಕಥೆಗಳ ವಿಧಾನವನ್ನು ಭಿನ್ನ ದಿಕ್ಕಿಗೆ ಕೊಂಡೊಯ್ಯಬಲ್ಲವು.

ಶಿವಕುಮಾರ ಮಾವಲಿ ಅವರೊಳಗೊಬ್ಬ ಪುಟಿಯುವ ತುಂಟನಿದ್ದಾನೆ. ಉತ್ಸಾಹದ ಬುಗ್ಗೆಯಿದೆ. ಹಾಗಾಗಿಯೇ ಮಾವಲಿ ಅವರ ಕಥೆಗಳಿಗೆ ವಿಶಿಷ್ಟ ಆಯಾಮ ಸಿಕ್ಕಿಹೋಗುತ್ತದೆ. ಅವರು ಕಥೆಯನ್ನು ಕಟ್ಟುತ್ತಾರೋ ಇಲ್ಲವೇ ಎದುರಿಗಿದ್ದುದನ್ನೇ ಕಥೆಯಾಗಿ ತಿದ್ದಿಬಿಡುತ್ತಾರೋ ಎಂದು ವಿಸ್ಮಯಪಡುವಂತೆ ನಮ್ಮ ಆಜುಬಾಜಿನಲ್ಲಿ ನಡೆಯುವ ಪ್ರತಿಯೊಂದಕ್ಕೂ ತಮ್ಮ ಸ್ಪರ್ಶ ನೀಡುತ್ತಾರೆ.

ಶಿವಕುಮಾರ ಮಾವಲಿ ಸಾಕಷ್ಟು ವರ್ಷಗಳಿಂದ ರಂಗಭೂಮಿಯ ಸಖ್ಯ ಹೊಂದಿರುವವರು. ಜೊತೆಗೆ ಪತ್ರಿಕೋದ್ಯಮವನ್ನು ಸನಿಹದಿಂದ ಕಂಡವರು. ಇದೇ ಕಾರಣಕ್ಕೂ ಇರಬಹುದು ಅವರ ಕಥೆಗಳಿಗೆ ನಾಟಕೀಯ ತಿರುವು ಸಿಕ್ಕುತ್ತದೆ. ನಾಟಕೀಯ ಎಳೆಗಳು ಕಥೆಯಾಗಿ ಮೈ ಬದಲಿಸುತ್ತವೆ. ಅಂದಂದಿನ ವಿದ್ಯಮಾನಗಳು ಇವರೊಳಗೆ ಓಲಾಡಿ ಕಥೆಯಾಗಿ ಎದ್ದು ನಿಲ್ಲುತ್ತವೆ.

ಶಿವಕುಮಾರ ಮಾವಲಿ ಅವರು ಇಂದಿನ ಕಾಲದ ಕಥನಕಾರ ಎಂದರೂ ತಪ್ಪಿಲ್ಲ. ಇವರ ಕಥೆಗಳು ಕಥೆಗಳನ್ನು ಮಾತ್ರ ಮುಂದಿಡುತ್ತಿಲ್ಲ ಬದಲಿಗೆ ಇಂದಿನ ಕಾಲದ ಉಸಿರಾಟವನ್ನು ನಮಗೆ ದಾಟಿಸುತ್ತಿವೆ. ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಶಿವಕುಮಾರ ಮಾವಲಿ ಎಂಬ ನಿಂತ ನೀರಲ್ಲದ ಮನಕ್ಕೆ ಕೈಯಿಟ್ಟ ಕಡೆಯೆಲ್ಲಾ ಕಥೆ ಎಂಬ ಅಕ್ಷಯ ಪಾತ್ರೆ.

 

 

ಚಂದ್ರಿಕಾ ಎಂಬ ‘ಚಿಟ್ಟಿ’

Chandrika

ಜಿ ಎನ್ ಮೋಹನ್

ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ.. ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’. ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್ ಒಂದು ಪದ್ಯಗಳ ಕಟ್ಟನ್ನು ನಾನಿದ್ದ ಕಲಬುರ್ಗಿಗೆ ಕಳಿಸಿ ಎಲ್ಲವನ್ನೂ ಓದಿ ಬಹುಮಾನ ಕೊಡು ಎಂದಿದ್ದ. ಹಾಗಾಗಿ ಬಿಸಿಲ ಬೆಳದಿಂಗಳ ನಗರಿಯಲ್ಲಿ ಕೂತು ಕವಿತೆಗಳ ಸರಮಾಲೆಯನ್ನೇ ಹರಡಿಕೊಂಡಿದ್ದ ನನಗೆ ಆ ಬಿಸಿಲಿನ ಶಾಖ ಇನ್ನಷ್ಟು ಹೆಚ್ಚಿಸುವಂತೆ ಮಾಡಿದ್ದು ಈ ಕವಿತೆ.

Chittiಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಉರುಳಿಸಿದ ಬಗ್ಗೆ ಇದ್ದ ಕವಿತೆ. ಒಂದು ಬಾಬ್ರಿ ಮಸೀದಿ ಮಾತ್ರ ಉರುಳಿರಲಿಲ್ಲ ಎಷ್ಟೋ ಜನರ ಮನದಲ್ಲಿ ಇದ್ದ ನಂಬಿಕೆಯ ಗುಮ್ಮಟಗಳೂ ಉರುಳಿಹೋಗಿದ್ದವು. ಅಂತಹ ನಂಬಿಕೆಯ ಅಲುಗಾಟದ ಬಗ್ಗೆ ಇದ್ದ ಕವಿತೆ ‘ಸರಯೂ ನದಿಯ ತೀರದಲ್ಲಿ’ . ಬರೆದದ್ದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ. ಇಂತಹ ಕವಿತೆಗಳು ಘೋಷಣೆಗಳಾಗಿ ಅಬ್ಬರಿಸಿ ಬೊಬ್ಬಿರಿದುಬಿಡುವ ಅಪಾಯವೇ ಹೆಚ್ಚಿದ್ದ ದಿನಗಳಲ್ಲಿ ಈ ಹುಡುಗಿ ಕವಿತೆ ತಣ್ಣಗೆ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಿತ್ತು.

ಕವಿತೆ ಬರೆದವರು ಯಾರು ಎಂದು ಬಹುಮಾನ ಘೋಷಿಸಿದಾಗ ಗೊತ್ತಾಯಿತು- ಆಕೆ ಪಿ ಚಂದ್ರಿಕಾ

ನಾನು ಪಿ ಚಂದ್ರಿಕಾ ಕವಿತೆಗಳ ಲೋಕಕ್ಕೆ ಹೆಜ್ಜೆ ಹಾಕಿ ಬಂದದ್ದು ಹೀಗೆ. ಆ ನಂತರ ಚಂದ್ರಿಕಾ ಕವಿತೆಗಳು ನನ್ನಿಂದ ತಪ್ಪಿಸಿಕೊಂಡಿಲ್ಲ. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ನನ್ನ ಕೈಗಿಟ್ಟದ್ದು ‘ಸೂರ್ಯಗಂಧಿ ಧರಣಿ’ಯನ್ನು . ಆ ವೇಳೆಗಾಗಲೇ ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಎನ್ನುವ ಕವನ ಸಂಕಲನ ಹಕ್ಕುಚ್ಯುತಿ ಮಂಡಿಸಿತ್ತು. ಸಂಕಲನದ ಶೀರ್ಷಿಕೆಯೇ ನನ್ನನ್ನು ಚಿತ್ ಮಾಡಿ ಹಾಕಿತ್ತು. ಆ ನಂತರದ ಸಂಕಲನ ಸೂರ್ಯಗಂಧಿ..ತಮ್ಮ ಒಡಲು ಸಂಭ್ರಮಿಸಿ ಪಲ್ಲವಿಸಲು ರೆಡಿ ಆಗುತ್ತಿದ್ದಾಗ ಕಂಡುಂಡ ಭಾವನೆಗಳ ಕೊಲಾಜ್ ಇದು. ಅಲ್ಲಿಂದ ಅವರ ಕವಿತೆಗಳು ನನ್ನೊಳ ಹೊಕ್ಕಾಡಿದೆ

ಪಿ ಚಂದ್ರಿಕಾ ನನಗೆ ಚಂದ್ರಿಕಾ ಅಲ್ಲ ‘ಚಿಟ್ಟಿ’ . ಎರಡನೆಯ ಬಾರಿ ನಾಮಕರಣ ಸಂಭ್ರಮ ಅನುಭವಿಸಿದಾಕೆ. ತೊಟ್ಟಿಲಲ್ಲಿ ಇದ್ದಾಗ ಕೊಟ್ಟ ಹೆಸರು ದೊಡ್ಡವರ ರೀತಿ ದನಿ ಹೊರಡಿಸುತ್ತಿತ್ತು. ಆದರೆ ಹಲವು ಕವಿತಾ ಸಂಕಲನ ಹೊತ್ತು ನಡೆಯುವಾಗ ಈಕೆ ಬದಲಾಗಿದ್ದು ಪುಟ್ಟ ಜಡೆಯ ಚಿಟ್ಟಿಯಾಗಿ

ಇದು ಯಾಕೆ ನನಗೆ ನೆನಪಾಗುತ್ತಿದೆ ಎಂದರೆ ಈ ‘ಚಂದ್ರಿಕಾ ಹಾಗೂ ಚಿಟ್ಟಿ’ ಎರಡರ ನಡುವಿನ ತುಯ್ದಾಟವೆ ಇವರ ಎಲ್ಲಾ ಬರಹಗಳ ಉಸಿರು. ಚಂದ್ರಿಕಾಗೆ ‘ಚಿಟ್ಟಿ’ ಬೇಕು ಆದರೆ ಲೋಕಕ್ಕೆ ‘ಚಂದ್ರಿಕಾ’ ಬೇಕು ಈ ಎರಡು ತೊಯ್ದಾಟಗಳ ಮಧ್ಯೆ ಇವರ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಮೈತಳೆದು ನಿಂತಿವೆ. ಹಾಗಾಗಿ ಅವರ ಕವಿತೆ ಕಥೆ ಕಾದಂಬರಿ ಎಲ್ಲವೂ ಸೇರಿ ಒಂದೇ ಕೃತಿ

ಚಂದ್ರಿಕಾ ಒಳಗೆ ಆಡುವ ಆ ಬಾಲ್ಯದ ಕಣ್ಣಾ ಮುಚ್ಚಾಲೆಯಾಟ ಅವರನ್ನು ಕಾಡುವ, ನಮ್ಮೊಳಗಿನ ತುಯ್ದಾಟಕ್ಕೂ ಉಸಿರು ನೀಡುವ ಬರಹಗಾರಳನ್ನಾಗಿ ಮಾಡಿಬಿಟ್ಟಿದೆ. ಚಂದ್ರಿಕಾ ಕವಿತೆಗಳ ಈ ಆಟವೇ ನನ್ನನ್ನು ಅವರ ‘ತಾಮ್ರವರ್ಣದ ತಾಯಿ’ ಬಗ್ಗೆ ಮಾತನಾಡಲು ವೇದಿಕೆಯ ಮೇಲೆ ನಿಲ್ಲುವಂತೆ ಮಾಡಿತ್ತು. ಆ ಕಾರಣಕ್ಕಾಗಿ ಅವರ ಕವಿತೆಗಳನ್ನು ಬಗೆಯುತ್ತಾ ಹೋದಾಗ ಗೊತ್ತಾಗಿಬಿಟ್ಟಿದ್ದು ಚಂದ್ರಿಕಾ ನನ್ನತೆಯೇ ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಗುಳೆ ಎದ್ದು ಹೋದವರು ಅಂತ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ- ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಹೋದವರನ್ನು ‘ಕಳೆದು ಹೋದವರು’ ಎಂದು ಕರೆದು ಕೈತೊಳೆದುಕೊಂಡು ಬಿಡುತ್ತದೆ ಬರಹದ ಜಗತ್ತು

ಆದರೆ ಚಂದ್ರಿಕಾ ಛಲಗಾತಿ. ಆಕೆ ಹಾಗೆ ಗುಳೆ ಹೋಗಿ ದೃಶ್ಯ ಜಗತ್ತಿನ ಹೆಡೆಮುರಿ ಕಟ್ಟಿ ಅಕ್ಷರ ಲೋಕಕ್ಕೆ ಎಳೆತಂದು ಬಿಟ್ಟರು. ಅವರ ಯಾವುದೇ ಕವನ ನಿಮ್ಮ ಎದುರಿಟ್ಟುಕೊಳ್ಳಿ. ಅಲ್ಲಿ ಆ ಕವಿತೆಗಳು ದೃಶ್ಯವಾಗಿ ನಿಮ್ಮ ಕಣ್ಣೆದುರಾಡದಿದ್ದರೆ ನನ್ನಾಣೆ. ಅಷ್ಟೇ ಅಲ್ಲ ದೃಶ್ಯ ಮಾಧ್ಯಮ ಇವರ ಕವನಗಳನ್ನೂ ತಿದ್ದಿದೆ. ಇವರು ಹಿರಿ ತೆರೆಗೆ, ಕಿರು ತೆರೆಗೆ ಬರೆಯಲು ಹೊರಡುವುದಕ್ಕೆ ಮುನ್ನ ಹಾಗೂ ನಂತರದ ಕವಿತೆ ಓದಿ, ಚಂದ್ರಿಕಾ ಬದಲಾಗಿದ್ದು
ಗೊತ್ತಾಗಿಬಿಡುತ್ತದೆ

ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುವ ಹುಡುಗಿ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಕವಿತೆಗಳಾಗಿಬಿಡುತ್ತದೆ. ಚಂದ್ರಿಕಾರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿ ಕೊಳ್ಳುತ್ತಾರೆ. ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಸುಳಿಯಲ್ಲಿ ಸಿಕ್ಕ ಅನುಭವಕ್ಕೆ ಮಾತು ಕೊಡುವುದು ಹೇಗೆ? ಅದು ಅನುಭವ ಅಷ್ಟೇ.. ಹಾಗೆ ಚಂದ್ರಿಕಾ ಬರಹಗಳ ಓದಿನ ಕಥೆ. ಅದಕ್ಕೆ ಮಾತು ಕೊಡುವುದು ಕಷ್ಟವೇ

ಚಂದ್ರಿಕಾ ಒಂದೇ ಸಮಯಕ್ಕೆ ಸಂಭಾಳಿಸುವ ಹಲವು ಲೋಕವಿದೆಯಲ್ಲಾ ಅದು ನನಗೆ ಅಚ್ಚರಿ ತರಿಸಿದೆ. ಮನೆ, ಅಕ್ಷರ ಹಾಗೂ ದೃಶ್ಯ ಜಗತ್ತನ್ನು ಅವರು ಒಂದೇ ಕಾಲಕ್ಕೆ ಮಣಿಸುತ್ತಾರೆ. ಅಷ್ಟೇ ಎಂದುಕೊಂಡಿದ್ದೆ ಅವರು ನನ್ನ ಜೊತೆ ‘ಚಿಟ್ಟಿ’ ಎನ್ನುವ ಹೆಸರನ್ನು ಉಸುರುವವರೆಗೆ. ಅವರು ನನ್ನೊಡನೆ ಒಂದು ದಿನ ‘ಚಿಟ್ಟಿ ಎಂಬುವವಳಿದ್ದಳು..’ ಎಂದು ಶುರು ಮಾಡಿದಾಗ ನಾನು ಗೊಳ್ಳನೆ ನಕ್ಕು ಒಂದು ಜೋಕ್ ಹೇಳಿದ್ದೆ. ‘ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ ಅಂದಾಗ ಕೇಳಿಸಿಕೊಳ್ಳುತ್ತಿದ್ದವರು ಹೇಳುತ್ತಾರೆ ‘ಇರ್ಲಿ ಬಿಡು ಏನಿವಾಗ’ ಅಂತ. ಚಂದ್ರಿಕಾ ‘ಚಿಟ್ಟಿ ಅಂತ ಒಬ್ಬಳಿದ್ದಳು’ ಎಂದಾಗ ನನಗೂ ಹಾಗೆ ಕೇಳಿಸಿತ್ತು ಆ ಕಾರಣಕ್ಕಾಗಿಯೇ ‘ಇರ್ಲಿಬಿಡು ಏನಿವಾಗ..?’ ಎಂದಿದ್ದೆ.

ಆದರೆ ಚಂದ್ರಿಕಾ ಒಳಗೇ ಚಿಟ್ಟಿ ನಡೆದುಕೊಂಡೇ ಬಂದಿದ್ದಾಳೆ ದಶಕಗಳ ಕಾಲ. ಹಾಗಾಗಿಯೇ ಆಕೆ ಚಂದ್ರಿಕಾ. ಒಂದು
ಅದಮ್ಯ ನೆನಪಿನ ಈ ಹುಡುಗಿ ತನ್ನ ನೆನಪಿನ ಓಣಿಯಲ್ಲಿ ನಡೆಯುತ್ತಲೇ ಇದ್ದಾಳೆ. ನನಗೋ ಡಿಸ್ನಿ ಲ್ಯಾಂಡ್ ನಲ್ಲಿ ಇಂದುchandrika312 ಮತ್ತು ಹಿಂದು ಎರಡನ್ನೂ ಹೊತ್ತುಕೊಂಡು ನಡೆಯುವ ಯಾವುದೋ ಮ್ಯಾಜಿಕ್ ಕನ್ಯೆಯಂತೆ ಚಂದ್ರಿಕಾ
ಅನಿಸಿಬಿಡುತ್ತಾರೆ.. ಇವರು ಎಷ್ಟು ತಮ್ಮ ನೆನಪುಗಳನ್ನು ಹೊದ್ದು ನಡೆಯುತ್ತಾರೆ ಎಂದರೆ ಇವರ ಜೊತೆಗಿನ ಒಂದು ಫೋನ್ ಮಾತೂ ಸಹಾ ಮಾತಾಗಿರುವುದಿಲ್ಲ.. ಫೋನಿನ ಆಚೆಗಿರುವ ಕಿವಿ ಲಿಪಿಕಾರ ಗಣೇಶನದ್ದಿರಬೇಕು ಎನ್ನುವಂತೆ ಆಕೆ ವ್ಯಾಸಳಾಗಿಬಿಡುತ್ತಾಳೆ

ನಾನೋ ನೆನಪಿನ ಹಂಗುಗಳಿಂದ ಹೊರ ಹಾರಲು ಕಾಯುತ್ತಿರುವವ. ಅವರೋ ನೆನಪಿನ ಕೋಟೆ ಕಟ್ಟಿ ಬದುಕುತ್ತಿರುವವರು ಹಾಗಾಗಿ ನಾನು ಚಂದ್ರಿಕಾ ಎಂದರೂ, ಚಂದ್ರಿಕಾ ಫೋನ್ ಎಂದರೂ ಒಂದು ಮಾರು ದೂರವೇ ಇರುತ್ತೇನೆ

ಅವರು ಚಿಟ್ಟಿ ಎಂದದ್ದಷ್ಟೇ ಗೊತ್ತು , ನಾನು ನನ್ನೊಳಗಿನ ‘ಡೋರ್ ನಂ ೧೪೨’ ಕಾಲದ ಹುಡುಗನ ಸಂಕಟ, ತಲ್ಲಣಗಳನ್ನ ಹೊರಗೆಳೆದುಕೊಂಡದ್ದೂ ಆಯ್ತು. ಚಂದ್ರಿಕಾಗೆ ಬರಿ ಎಂದೆ. ಆಕೆ ‘ಯಾವುದೀ ಪ್ರವಾಹವು..’ ಎನ್ನುವಂತೆ ಬರೆಯುತ್ತಲೇ ಹೋದರು. ‘ಅವಧಿ’ ಅವರ ಪ್ರವಾಹಕ್ಕೆ ಲೆಡ್ ಟಿ ವಿ ಯಂತೆ ಕೆಲಸ ಮಾಡಿತು. ಅವರೂ ಆ ನೆನಪ ಪ್ರವಾಹದಲ್ಲಿ ಕೊಚ್ಚಿಹೋದರೇನೋ.. ಚಿಟ್ಟಿಗೆ ಎದೆ ಗುಬ್ಬಿ ಮೂಡಿದ್ದೇ ತಡ ದಿಢೀರ್ ಅಂತ ಅವಳನ್ನು ಆಚೆ ಹಾಕಿಯೇ ಬಿಟ್ಟರು

ಹೀಗೆ ಚಿಟ್ಟಿ ಕಾದಂಬರಿ ದಿಢೀರ್ ಮುಗಿಯಿತು, ಆದರೆ ಅವರ ನೆನಪುಗಳಲ್ಲ. ಹಾಗಾಗಿ ಚಿಟ್ಟಿ ಇನ್ನೊಂದು ಹೆಸರು ಹೊದ್ದು ಯಾವಾಗ ಬೇಕಾದರೂ ಹೊರಗೆ ಕಾಲಿಟ್ಟಾಳು. ಚಂದ್ರಿಕಾಗೆ ಬರೆಯುವುದು ಯಾರಿಗೋ ಅಲ್ಲ, ಪ್ರಕಟಿಸಲೂ ಅಲ್ಲ ಅದು ಅವರಿಗೆ ‘ತಾನೊಬ್ಬಳೇ ಆಡುವ ಆಟ’

ಇನ್ನೂ ಪ್ರೆಸ್ ನ ಇಂಕಿನ ಘಮ ಆರದಿರುವಾಗ, ಬಿಸಿ ತಣ್ಣಗಾಗದಿರುವಾಗಲೇ ಚಂದ್ರಿಕಾ ‘ಚಿಟ್ಟಿ’ ಕಾದಂಬರಿಯ ಮೊದಲ ಪ್ರತಿ ನನ್ನ ಕೈಗಿಟ್ಟರಲ್ಲಾ.. ಆಗ ಓಲಾಡಿದ ನೆನಪುಗಳೇ ಇವು..