ಕಾಣದ ಕಡಲಿನ ಮೊರೆತದ ಜೋಗುಳ.. ——-

ಹೌದಾ..!! ಎಂದು ಕಣ್ಣನ್ನು ಅಷ್ಟೂ ಅಗಲ ಬಿಟ್ಟು ಕೇಳಿದ್ದೆ. ನನ್ನ ಸಂಗಾತಿಯ ಒಡಲೊಳಗೆ ಒಂದು ಜೀವ ಅರಳಲು ಸಜ್ಜಾಗುತ್ತಿದೆ ಎನ್ನುವ ವಿಷಯ ನನ್ನ ಕಿವಿಗೆ ಬಿದ್ದಾಗ ನನಗೆ ಹೇಳಲು ಸಾಧ್ಯವಾದದ್ದು ಅಷ್ಟು.

ಆಮೇಲೆ ನನ್ನ, ಅವಳ ಜೊತೆಗೆ ಅದುವರೆಗೆ ಇದ್ದದ್ದಕ್ಕಿಂತ ಭಿನ್ನವಾದ ಒಂದು ಸಂಗೀತ ಸುಳಿಯುತ್ತಾ ಇದ್ದದ್ದು ಮೇಲಿಂದ ಮೇಲೆ ಅರಿವಿಗೆ ಬರುತ್ತಾ ಹೋಯಿತು. ಅವಳ ಹಿಂದೆ ಮುಂದೆಯೇ ಸುತ್ತುತ್ತಾ, ಸ್ಕೂಟರ್ ಅನ್ನು ಹಳ್ಳ ಕೊಳ್ಳದಲ್ಲಿ ಕುಲುಕದಂತೆ ನಡೆಸುತ್ತಾ.. ನಾನು ಮಹಾ ಜವಾಬ್ದಾರಿ ಎನ್ನುವಂತೆ ವರ್ತಿಸುತ್ತಿದ್ದುದಷ್ಟೇ ನನ್ನಲ್ಲಿ ಆದ ಬದಲಾವಣೆ. ಆದರೆ ಅವಳು ಪ್ರತೀ ದಿನ ಸುಸ್ತು, ಸಂಕಟ ಎಲ್ಲವನ್ನೂ ತನ್ನ ಮುಗುಳ್ನಗುವಿನ ಲೇಪನದೊಳಗೆ ಅಡಗಿಸಿಟ್ಟುಕೊಳ್ಳುತ್ತಾ ಹೋದಳು. ಮುಂದೊಂದು ದಿನ ಅವಳ ಹೊಟ್ಟೆಯೊಳಗೆ ಎರಡು ಪಾದಗಳು ಸ್ಪಷ್ಟವಾಗಿ ಕಾಣುತ್ತಿತ್ತು. ಕೈಯಿಟ್ಟರೆ ಒದ್ದು.. ‘ಕಾಣದ ಕಡಲಿನ ಮೊರೆತದ ಜೋಗುಳ’ದ ಅನುಭವ ನೀಡುತ್ತಿತ್ತು. ಆಗಸದಲ್ಲಿ ತುಂಬು ಚಂದ್ರಮನಿದ್ದ ಒಂದು  ದಿನ ಅವಳೊಂದಿಗೆ ಮೂರನೆಯ ಜೀವವನ್ನು ಬರಮಾಡಿಕೊಳ್ಳಲು ಅವಳ ತವರ ಸೇರಿಕೊಂಡೆವು.

ಇನ್ನೇನು ಹೆರಿಗೆ ಕೋಣೆಗೆ ಹೋಗಲು ನಿಮಿಷವಿರುವಾಗ ಅವಳು ನನ್ನ ಹುಡುಕಿ ಬಂದವಳೇ ‘ಏಯ್ ಹೆದರ್ಕೋಬೇಡ, ಎರಡು ನಿಮಿಷ ಅಷ್ಟೇ..’ ಅಂದವಳೇ ಔಷಧದ ಕಟು ಘಮವಿದ್ದ ಕೋಣೆಯೊಳಗೆ ಸೇರಿಹೋದಳು. ಸ್ವಲ್ಪ ಹೊತ್ತಿನೊಳಗೇ ದೇವಲೋಕದಿಂದ ಒಂದು ಹೂ ನನ್ನನ್ನೇ ಹುಡುಕುತ್ತಾ ಬಂತೇನೋ ಎನ್ನುವಂತೆ ನನ್ನ ಅಂಗೈಯೊಳಗೆ ‘ಕಿನ್ನರಿ’ ಎಂಬ ಗುಬ್ಬಚ್ಚಿಯಿತ್ತು. ನಾನೂ, ಅವಳು, ಕಿನ್ನರಿ ಎಂಬ ಗುಬ್ಬಚ್ಚಿಯೂ.. ಜೊತೆ ಜೊತೆಯಾಗಿಯೇ ಬಾಣಂತನದ ಲೋಕದೊಳಗೆ ಈಜಾಡಿದ ರೀತಿ ಇದು.

ನನಗೆ ಗೊತ್ತಾಗಿದ್ದು ಅಷ್ಟೇ…

ಹಾಗಾಗಿಯೇ ನನಗೂ ಕುತೂಹಲವಿತ್ತು. ಮಗು ಹುಟ್ಟುವ ಬಗ್ಗೆ, ಹುಟ್ಟಿದ ನಂತರ ಮುಂದೇನು ಎನ್ನುವುದರ ಬಗ್ಗೆ. ಹೆರಿಗೆ ಕೋಣೆಯೊಳಗೆ ನಗು ನಗುತ್ತ ನಾದದ ನದಿಯಂತೆ ನಡೆದುಹೋದ ಅವಳು ಮಗು ಹುಟ್ಟಿದ ನಂತರ ನೋವಿನ ಆಲಾಪ ಹೊರಡಿಸುತ್ತಿದ್ದುದು ಇನ್ನೂ ನನ್ನ ಕಿವಿಯೊಳಗೆ ಗುಂಯ್ ಗುಟ್ಟುತ್ತಿದೆ.

ಅಂತಹ ಇನ್ನೊಂದು ಜೋಡಿಯ ನೋವು, ನಲಿವಿನ ಆಲಾಪವೇ ಈ ‘ಬಾಳಂತಿ ಪುರಾಣ’.

‘ಅಪ್ಪ, ಮಗು ಹುಟ್ಟೋದು ಹೇಗೆ?’ ಎನ್ನುವ ಪ್ರಶ್ನೆಯೊಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹೊರತಂದ ಪುಸ್ತಕದಲ್ಲಿತ್ತು. ಮಕ್ಕಳಿಗೆ ವಿಜ್ಞಾನ ಲೋಕದ ಕೌತುಕವನ್ನು ಹಂಚಲು ಹೊರತಂದ ಪುಸ್ತಕ ಅದು. ಒಂದು ಜೀವ ಕಣ್ಣು, ಮೂಗು ಲೇಪಿಸಿಕೊಂಡು ಹೊರ ಜಿಗಿಯುವ, ಬೆಳೆಯುವ ಕೌತುಕವನ್ನು ನಾವು ಒಂದು ಗುಟ್ಟಾಗಿ ಉಳಿಸಿಬಿಟ್ಟಿರುವುದು ಏಕೆ ಎನ್ನುವ ಅಂಶ ನನ್ನನ್ನು ಕಾಡುತ್ತಲೇ ಇತ್ತು. ಜೀವ ವಿಜ್ಞಾನದ ಒಂದು ಮಹತ್ತರ ಬೆಳವಣಿಗೆಯನ್ನು ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಿಬಿಟ್ಟಿದ್ದೆವು. ಅಂತಹ ಅಪರಿಚಿತ ಕತ್ತಲ ಲೋಕದ ಪರದೆಯನ್ನು ಶ್ರೀಕಲಾ ಡಿ ಎಸ್ ಸರಿಸಿದ್ದಾರೆ.

ಅನುಪಮಾ ನಿರಂಜನ ಅವರು ಇಂದಿಗೂ ನಮ್ಮ ನೆನಪಿನಲ್ಲುಳಿದಿರುವುದಕ್ಕೆ ಅವರು ಬರೆದ ಸಾಹಿತ್ಯ ಒಂದು ತೂಕವಾದರೆ ಅಷ್ಟೇ ತೂಕ  ಅವರ ‘ಕೇಳು ಕಿಶೋರಿ’ , ‘ತಾಯಿ ಮಗು’ ಎನ್ನುವ ಕೃತಿಗೂ ಇದೆ. ಋತುಸ್ರಾವದಿಂದ ಹಿಡಿದು ಬಾಣಂತನದವರೆಗೆ ಎಲ್ಲವೂ ಪಿಸುಮಾತುಗಳಾಗಿದ್ದಾಗ ವೈಜ್ಞಾನಿಕವಾಗಿ ಅದನ್ನು ಬರೆದು ಒಂದು ತಲೆಮಾರಿಗೆ ಧೈರ್ಯ ಕೊಟ್ಟವರು ಡಾ ಅನುಪಮಾ ನಿರಂಜನ. ಹಾಗೆಯೇ ಶ್ರೀಕಲಾ ಡಿ ಎಸ್ ಅವರೂ ಸಹಾ ನಾಳೆಯ ದಿನಕ್ಕೂ ಸಲ್ಲುವ, ನೆನಪಿಸಿಕೊಳ್ಳುವ ಕೃತಿಯನ್ನು ನಮ್ಮ ಕೈಗಿಟ್ಟಿದ್ದಾರೆ.

ಪತ್ರಕರ್ತೆಯಾಗಿ, ನೃತ್ಯಗಾತಿಯಾಗಿ ಹೆಸರು ಮಾಡಿದ ಶ್ರೀಕಲಾ ಈ ‘ಬಾಳಂತಿ ಪುರಾಣ’ದ  ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಐ ಟಿ -ಬಿ ಟಿ ಯ ಕಾಲದಲ್ಲಿದ್ದರೂ, ಕ್ಷಣಮಾತ್ರಕ್ಕೆ ಜಗತ್ತಿನ ಅನೇಕ ಸಂಗತಿಗಳನ್ನು ಎಳೆದುಕೊಂಡು ಅಂಗೈಯೊಳಗೆ ಕೂರಿಸಿಕೊಳ್ಳುವ ಅವಕಾಶವಿದ್ದರೂ ಹೆಣ್ಣಿನ ಲೋಕ ಮಾತ್ರ ಅರಿವಿನ ಪರಿಧಿಯಿಂದ ಆಚೆಯೇ ಕೂರಿಸಲಾಗಿದೆ. ಆ ಕಾರಣಕ್ಕಾಗಿಯೇ ಶ್ರೀಕಲಾ ಅವರ ಈ ಹೆಜ್ಜೆಗೆ ಮಹತ್ವದ ತೂಕವಿದೆ.

ಶ್ರೀಕಲಾ ಅವರ ಬರಹದಲ್ಲಿ ತುಂಟತನವಿದೆ. ಹೇಳುವುದರಲ್ಲಿ ಸ್ಪಷ್ಟತೆ ಇದೆ. ಆ ಕಾರಣಕ್ಕಾಗಿಯೇ ಈ ಕೃತಿ ಬಾಣಂತನದ ಅರಿವು ಮೂಡಿಸುವ ಒಂದೇ ಕೆಲಸವನ್ನು ನಿರ್ವಹಿಸುತ್ತಿಲ್ಲ. ಲವಲವಿಕೆಯ ಹುಡುಗಿಯೊಬ್ಬಳು ತನ್ನ ಬಾಣಂತನದ ಬರಹಕ್ಕೂ ಅಷ್ಟೇ ಲವಲವಿಕೆಯ ಆಯಾಮ ನೀಡಿದ್ದಾಳೆ. ಶ್ರೀಕಲಾ ಫೇಸ್ ಬುಕ್ ನಲ್ಲಿ ತನ್ನ ಬಾಳಂತನದ ಎರಡು ಬರಹ ಏರಿಸಿದಾಗಲೇ ನನಗೆ ಇದು ನಾವೇ ಪ್ರಕಟಿಸಬೇಕಾದ ಕೃತಿ ಅನಿಸಿಬಿಟ್ಟಿತು. ಅದಕ್ಕೆ ಕಾರಣ ಹಾಗೇನಾದರೂ ನಾವು ಹೆರಿಗೆಯ ಬಗ್ಗೆ ಪುಸ್ತಕ ತರದೇ ಹೋದಲ್ಲಿ ಈ ಕಾಲದ ನೆಟಿಜನ್ ಗಳು ಮಗುವನ್ನೂ ಸಹಾ ಯಾವುದೇ ಆಪ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದೇ ನಂಬಿಬಿಡುವ ಅಪಾಯವಿದೆ ಎಂದು ಗೊತ್ತಿತ್ತು.

ಇರಲಿ, ‘ಅಕದಾಸ ದಂಪತಿ’ ಎಂದೇ ಹೆಸರಾದ ಗಣಪತಿ ಭಟ್ ಮತ್ತು ಮಹಾಂಕಾಳಮ್ಮ ಜೋಡಿ ಮಲೆನಾಡ ಭಾಗದಲ್ಲಿತ್ತು. ಆ ಕಾಲಕ್ಕೆ ನೂರಕ್ಕೂ ವಿಧವೆಯರ ಮರುವಿವಾಹಕ್ಕೆ ದುಡಿದ ಜೀವಗಳು ಅವು. ಒಂದು ಮಹತ್ತರ ಆಂದೋಲನ ರೂಪಿಸಿದವರು. ಅಂತಹ ದಂಪತಿಗಳ ಬಗ್ಗೆ ಬರೆದ, ಅವರ ಹಾದಿಯಲ್ಲೇ ನಡೆದವರು ಲಕ್ಷ್ಮೀನಾರಾಯಣ ಹೆಗಡೆ ಕಲಗಾರು. ಅವರ ಕಾರಣವಾಗಿ ಅವರ ಮಗ ವಿನಾಯಕ ಭಟ್ ಕಲಗಾರು, ಸೊಸೆ ಶ್ರೀಕಲಾ ಹೀಗೆ ಈ ಕೃತಿಯಲ್ಲಿ ಪ್ರಸ್ತಾಪಿಸಿರುವ ಹತ್ತೂ ಸಮಸ್ತರ ಜೊತೆ ನಂಟು ಬೆಸೆಯಲು ಕಾರಣವಾಯಿತು. ಹೀಗೆ ಎರಡೂ ಕಡೆಯ ಕುಟುಂಬಗಳ ಜೊತೆಗಿನ ಆತ್ಮೀಯತೆಯೇ ಈ ಕೃತಿಯನ್ನು ಬರೆದು ಕೊಡಲೇಬೇಕು ಎಂದು ಶ್ರೀಕಲಾರನ್ನು ಒತ್ತಾಯ ಮಾಡುವ ಹಕ್ಕನ್ನು ನನಗೆ ನೀಡಿಬಿಟ್ಟಿತ್ತು.

ಸಾರ್ಥಕ, ಸಂಪನ್ನನ ನಂತರದ ಕೂಸು ಇದು. ದೇಹಕ್ಕೆ ಬಳಲಿಕೆ ನೀಡದ, ಆದರೆ ಮಾನಸಿಕವಾಗು ಸಾಕಷ್ಟು ಸುಸ್ತು ಮಾಡಿ ಹಾಕಿದ ಕೂಸು. ಈ ಕೃತಿಯೂ ಸಂಪನ್ನವಾಗಲಿ ಎನ್ನುವ ಆಶಯದೊಂದಿಗೆ ‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ.. ಎಂದ ಅದೆಷ್ಟೋ ತಾಯಂದಿರ ಆ ಒಡಲ ಪ್ರೀತಿಗೆ ಇದು ‘ಬಹುರೂಪಿ’ಯ ಪುಟ್ಟ ಕಾಣಿಕೆ.