ಕಾಡು- ನಾಡಿನ ಕನ್ನಡಿ ..

ವಿನೋದ್ ಹಾಗೂ ನಾನೂ ಕೈ ಕುಲಕಬೇಕಾಗಿ ಬಂದದ್ದು ನಟ ಪ್ರಕಾಶ್ ರೈ ಅವರ ಸಮ್ಮುಖದಲ್ಲಿ. ‘ಕನ್ನಡಪ್ರಭ’ ಮತ್ತು ‘ಸುವರ್ಣ ಚಾನಲ್’ನ ಹುಲಿ ಸಂರಕ್ಷಿಸುವ ಅಭಿಯಾನದ ರಾಯಭಾರಿ ಪ್ರಕಾಶ್ ರೈ. ಆ ಇಡೀ ಯೋಜನೆಯನ್ನು ತನ್ನ ಮನೆಕೆಲಸವೇನೋ ಎನ್ನುವಷ್ಟು ಶ್ರದ್ಧೆಯಿಂದ ರೂಪಿಸಿ, ಜಾರಿಗೊಳಿಸಿದವರು ವಿನೋದಕುಮಾರ್ ಬಿ ನಾಯ್ಕ್. ಅವರಿಬ್ಬರೂ ಹುಲಿ ಕಥೆಗಳನ್ನು ಮಾತನಾಡುತ್ತ ಇದ್ದಾಗ ನಾನು ಸುಮ್ಮನೆ ಕಿವಿಯಾಗಿ ಕುಳಿತೆ. ವಿನೋದ್ ತಮ್ಮ ನೆನಪಿನ ಗಣಿಯಿಂದ ಮೊಗೆದು ಕೊಡುತ್ತಿದ್ದ ಕಥೆಗಳಂತೂ ನನ್ನೊಳಗೆ ರೋಮಾಂಚನ ಹುಟ್ಟಿಸುತ್ತಿತ್ತು.

ಮತ್ತೆ ಮತ್ತೆ ಇಂತಹ ಎಷ್ಟೋ ಭೇಟಿಗಳಾದವು. ವಿನೋದ್ ಕಾಡಿನ ಕಥೆಗಳನ್ನು ಹೇಳುತ್ತಲೇ ಇದ್ದರು. ನಾನು ಎಂದಿನಂತೆ ಮಾತು ಆಡುವುದನ್ನು ಬದಿಗಿಟ್ಟು ಕಿವಿಗೆ ಮಾತ್ರ ಕೆಲಸ ಕೊಟ್ಟು ಕೂರುತ್ತಿದ್ದೆ, ಹೀಗಿರುವಾಗ ಯಾವುದೋ ಒಂದು ಕ್ಷಣದಲ್ಲಿ ನನಗೆ ಗೋಚರಿಸಿದ್ದು ವಿನೋದ್ ತಮ್ಮ ಅಷ್ಟೂ ಕಥೆಗಳಲ್ಲಿ ಬರೀ ಕಾಡಿನ ಬಗ್ಗೆ, ಕಾಡಿನ ಉಳಿವಿನ ಬಗ್ಗೆ, ಪ್ರಾಣಿ ಪಕ್ಷಿಗಳ ಕ್ಷೇಮದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ ಅವರು ಕಾಡು ಹಾಗೂ ಮನುಷ್ಯರಿಬ್ಬರ ಕ್ಷೇಮದ ಬಗ್ಗೆಯೂ ಹೇಳುತ್ತಿದ್ದಾರೆ ಎಂದು. ಅಂದಿನಿಂದ ನನ್ನ ಹಾಗೂ ವಿನೋದ್ ನಂಟು ಹೆಚ್ಚುತ್ತಲೇ ಹೋಯಿತು.

ನನಗೆ ‘ಪರಿಸರವೊಂದೇ..’ ಎನ್ನುವ ಪರಿಸರವಾದಿಗಳ ಜೊತೆ ಈ ಮೊದಲಿನಿಂದಲೂ ತಕರಾರಿದೆ. ಅಂತೆಯೇ ವನ್ಯಪ್ರಾಣಿಗಳ ರಕ್ಷಣೆಗೆ ಮಾತ್ರ ಟೊಂಕ ಕಟ್ಟಿ ನಿಂತವರ ಬಗ್ಗೆಯೂ. ಇದಕ್ಕೆ ಕಾರಣವೂ ಇದೆ. ನಾನು ಹಲವು ವರ್ಷಗಳ ಕಾಲ ಜಾನಪದ ಲೋಕದ ಮಹನೀಯರಾದ ಎಚ್ ಎಲ್ ನಾಗೇಗೌಡರೊಂದಿಗೆ, ಎಸ್ ಕೆ ಕರೀಂ ಖಾನ್ ಅವರೊಂದಿಗೆ, ಹಿ ಚಿ ಬೋರಲಿಂಗಯ್ಯ, ಪುರುಷೋತ್ತಮ ಬಿಳಿಮಲೆ ಅವರೊಂದಿದೆ ಕಾಡು ಮೇಡು ಸುತ್ತಿದ್ದೇನೆ. ಈ ನದಿಗೆ ನನಗೆ ಕಲಿಸಿಕೊಟ್ಟದ್ದು ಅಪಾರ. ಮೇಘಾನೆಯಂತ ಎತ್ತರದ ಗುಡ್ಡಗಳಲ್ಲಿ ಇರುವ ಹಸಳರೂ, ಪಶ್ಚಿಮ ಘಟ್ಟದ ಆಳ ಕಣಿವೆಗಳಲ್ಲಿದ್ದ ಮಳೆ ಕುಡಿಯರು, ಕಡಲ ತೀರದಲ್ಲಿರುವ ಹಾಲಕ್ಕಿ ಒಕ್ಕಲಿಗರು..

ನನಗೆ ಕಲಿಸಿದ ಪಾಠಗಳು ಹಲವಾರು. ಆ ನಂತರ ಪಿ ಸಾಯಿನಾಥ್ ಅವರ Everybody loves a good drought ಓದಿದ ನಂತರ, ಅದನ್ನು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಆಗಿ ಅನುವಾದಿಸುವಾಗ ಈ ಪರಿಸರವಾದ ಹೇಗೆ ಮನುಷ್ಯಮುಖಿಯಾಗಿಲ್ಲ ಎನ್ನುವುದು ಮೇಲಿಂದ ಮೇಲೆ ಅರಿವಿಗೆ ಬರತೊಡಗಿತು. ಜೊತೆಗೆ ನಾನು ಪಿ ಸಾಯಿನಾಥ್ ಅವರ ಮಹತ್ವದ ಯೋಜನೆ ‘ಪರಿ’- Peoples Archive of Rural India ದಲ್ಲಿ ತೊಡಗಿಸಿಕೊಂಡ ನಂತರ ಕಾಡೇ ಮನೆಯಾದ ಮನುಷ್ಯರ ಬಗ್ಗೆ, ಕಾಡು ಅವರ ಬದುಕಿನ ರಂಗಸಾಲೆಯಾದ ಬಗ್ಗೆ, ಕಾಡು ಹಾಗೂ ಮನುಷ್ಯನ ಸೌಹಾರ್ದಯುತ ಸಹಬಾಳ್ವೆಯ ಬಗ್ಗೆ, ವನ್ಯಮೃಗಗಳು ಹಾಗೂ ಮನುಷ್ಯನ ಸಹಬಾಳ್ವೆಯ ಬಗ್ಗೆ ಹಲವು ಪಾಠಗಳು ದಕ್ಕುತ್ತ ಹೋದವು.

ಹಾಗಾಗಿಯೇ ನಾನು ಕಾಡು ಪ್ರಾಣಿ ಹಾಗೂ ಮನುಷ್ಯ ಈ ಮೂರರ ಬಗ್ಗೆಯೂ ಒಲವು ಇಟ್ಟುಕೊಂಡವರನ್ನು ಹುಡುಕುತ್ತಿದ್ದೆ. ನಾನು ಬಂಡೀಪುರ ಅರಣ್ಯ ಹೊಕ್ಕಾಗ, ನಾಗರಹೊಳೆಯ ಕಾಡುಗಳಲ್ಲಿ ಅಡ್ಡಾಡಿದಾಗ, ಪಶ್ಚಿಮ ಘಟ್ಟದ ಕಾಡುಗಳನ್ನು ಹೊಕ್ಕಾಗ, ಕಾಳಿ ನದಿಯ ಜುಳು ಜುಳು ನಾದದ ಬೆನ್ನತ್ತಿ ಅದರ ದಂಡೆಗುಂಟ ಹೆಜ್ಜೆ ಹಾಕಿದಾಗ.. ಹೀಗೆ ಎಲ್ಲಾ ಸಮಯದಲ್ಲೂ ಶುದ್ಧ ಪರಿಸರವಾದವನ್ನು ಪ್ರತಿಪಾದಿಸುವ ಮನಸ್ಸುಗಳೇ ಕಂಡವು. ಹಾಗಾಗಿಯೇ ವಿನೋದಕುಮಾರ್ ನಾಯ್ಕ್ ಮಾತನಾಡುವಾಗ ನನಗೆ ತಕ್ಷಣ ಇವರು ಭಿನ್ನ ಎನಿಸಿದ್ದು. ಅವರ ಮಾತಿನಲ್ಲಿ ಮನುಷ್ಯನಿಗೂ ಒಂದು ಜಾಗವಿತ್ತು.

ಆ ನಂತರ ವಿನೋದ್ ಹಾಗೂ ನಾನು ಲೆಕ್ಕವಿಲ್ಲದಷ್ಟು ಬಾರಿ ಭೇಟಿಯಾಗಿದ್ದೇವೆ. ಅವರಿಂದ ನೇರವಾಗಿ ನೂರೆಂಟು ಕಥೆಗಳನ್ನು ಕೇಳಿ ಅಚ್ಚರಿಗೊಂಡಿದ್ದೇನೆ. ವಿನೋದ್ ಪಕ್ಷಿಗೆ ಕಲ್ಲೆಸೆದು ನಂತರ ಆ ಪಕ್ಷಿ ಸೈಬೀರಿಯಾದಿಂದ ಸಾವಿರಾರು ಮೈಲು ಹಾರಿ ಬಂದದ್ದು ತಿಳಿದು ಕಲ್ಲನ್ನು ಬದಿಗಿಟ್ಟು ಪಕ್ಷಿಪ್ರೇಮಿಯಾದವರು, ನಂತರ ಮೃಗಾಲಯದಲ್ಲಿ ಪ್ರಾಣಿಗಳ ಒಡನಾಟ, ಗೆಳೆಯರೊಂದಿಗೆ ಕಾಡಿನ ಓಡಾಟ ಇವರನ್ನು ಸಂಪೂರ್ಣ ಬದಲಿಸಿತು.

ಅವರು ತಮ್ಮ ಅನುಭವಗಳನ್ನು ತಾವಿದ್ದೆಡೆಯೆಲ್ಲಾ ಹೊತ್ತು ಸಾಗಿದ್ದಾರೆ. ಹಾಗಾಗಿ ಪತ್ರಿಕೆ, ಟೆಲಿವಿಷನ್ ಗೆ ಕಾಲಿಟ್ಟಾಗಲೂ ಅವರ ವನ್ಯ ಪ್ರೇಮವನ್ನು ಹೊತ್ತೇ ತಂದಿದ್ದಾರೆ. ವಿನೋದಕುಮಾರ್ ಅಪರೂಪದ ಪತ್ರಕರ್ತ. ವನ್ಯಜೀವಿ ಕ್ಷೇತ್ರದಲ್ಲಿ ಪರಿಣಿತಿ ಪಡೆದ ಪತ್ರಕರ್ತರು ಇಲ್ಲವೇ ಇಲ್ಲ ಎನ್ನಬಹುದು. ಅವರು ಕಾಡು ಮತ್ತು ನಾಡಿಗೆ ಕನ್ನಡಿ ಹಿಡಿದ ಕಾರಣಕ್ಕಾಗಿಯೇ ನನಗೆ ಇಷ್ಟ. ಪ್ರಾಣಿಗಳೆಲ್ಲಾ ನಾಡಿಗೆ ನುಗ್ಗುತ್ತಿರುವ ವೇಳೆಯಲ್ಲಿ ಕಾಡು ಹೊಕ್ಕವರು ವಿನೋದಕುಮಾರ್ ನಾಯ್ಕ್. ಕಾಡಿನ ಬದುಕು, ಅಲ್ಲಿನ ಕಲರವ, ಅಲ್ಲಿನ ಬದಲಾಗುತ್ತಿರುವ ಬದುಕು, ಅಲ್ಲಿನ ಸಂಕಟ ತೊಳಲಾಟ ಎಲ್ಲವನ್ನೂ ಬಲ್ಲ ವಿನೋದ್ ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ಪತ್ರಕರ್ತ.

ಪತ್ರಿಕೋದ್ಯಮ ಎನ್ನುವುದು ಅಧಿಕಾರದ ಗದ್ದುಗೆಯ ಸುತ್ತಾ ಗಿರಕಿ ಹೊಡೆಯುತ್ತಿರುವ ಈ ದಿನಗಳಲ್ಲಿ ವಿನೋದ್ ಕಾಡು- ನಾಡಿಗೆ ಕೊಂಡಿಯಾಗಿದ್ದಾರೆ. ‘ಕನ್ನಡಪ್ರಭ’ ಪತ್ರಿಕೆಯಲ್ಲಿ ‘ಜಂಗಲ್ ಡೈರಿ’ ಹೆಸರಿನಲ್ಲಿ ಪ್ರಕಟವಾದ ಅಂಕಣ ಬರಹಗಳನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದನ್ನು ಓದಿ ಮುಗಿಸುವ ವೇಳೆಗೆ ನಿಮಗೂ ಚಂದ್ರಶೇಖರ ಕಂಬಾರರು ಬಣ್ಣಿಸಿದಂತೆ ‘ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ..’ ಎಂದು ನಿಮಗೂ ಅನಿಸದಿದ್ದರೆ ಕೇಳಿ..

 

Leave a comment