ಅಮೆರಿಕನ್‌ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು..

ತನ್ನ ಹೆಸರಿನ ಜೊತೆಗೆ ಸಾಕ್ಷಾತ್ ಶ್ರವಣ ಕುಮಾರನಂತೆ ತನ್ನ ತಂದೆ ತಾಯಿಯರ ಹೆಸರನ್ನು ಹೊತ್ತೇ ಸಾಗುವ ಆಕರ್ಷ ಸದಾ ನನ್ನ ಕುತೂಹಲದ ಕೇಂದ್ರ. ಕುಳಿತ ಕಡೆ ಕುಳಿತುಕೊಳ್ಳದ, ಯಾವುದೋ ಒಂದು ಅವಸರದಲ್ಲಿರುವಂತೆ ಹೆಜ್ಜೆ ಹಾಕುವ, ಒಂದೇ ಬಾರಿಗೆ ಎಲ್ಲಾ ಮಾತನ್ನು ಮುಂದೆ ಸುರಿದು ಬಿಡಬೇಕು.. ಎನ್ನುವ ಧಾವಂತದ ಈ ಹುಡುಗನ ಒಳಗೆ ಒಂದು ‘ಗ್ರಾಫಿಟಿಯ ಹೂ’ವಿರಬಹುದು ಎಂದು ನನಗೆ ಗೊತ್ತೇ ಇರಲಿಲ್ಲ.

ಫ್ರಾನ್ಸ್, ಅಮೇರಿಕಾ, ಸ್ವಿಡ್ಜರ್ ಲ್ಯಾಂಡ್ ಗಳಲ್ಲಿ ಉಸಿರಾಡಿ ಬಂದ ಆಕರ್ಷನಿಗೆ ಬದುಕು, ಭಾಷೆ ಎಲ್ಲವೂ ಒಂದು ಗ್ರಾಫಿಟಿಯ ಹೂವಾಗಿಯೇ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಬದುಕಿಗೆ ಗಡಿ ಗೋಡೆಗಳನ್ನು ಕಟ್ಟಿಕೊಳ್ಳದ, ಗ್ರೀನ್ ವಿಚ್ ಮೀನ್ ಟೈಮ್ ನಿಂದ ಸಮಯ ಅಳೆಯದ, ಕಾಫಿ ಕಪ್ಪಿನೊಳಗಿನ ಕಡು ಬಣ್ಣದ ಮೂಲಕ ರುಚಿ ಅಳೆಯದ ಒಂದು ತಲೆಮಾರು ತಲೆ ಎತ್ತಿದೆ.

‘ಸಿಟಿಜನ್’ ಎನ್ನುವ ಕಲ್ಪನೆ ದೂರವಾಗಿ ‘ನೆಟಿಜನ್’ ಎನ್ನುವುದು ವಾಸ್ತವವಾಗುತ್ತಿರುವ ಕಾಲದ ತಲೆಮಾರು ಇದು. ಒಂದು ದೇಶಕ್ಕೆ ಜೋತು ಬೀಳದ, ಒಂದೇ ಭಾಷೆ ಎನ್ನುವುದನ್ನು ಕೀಳರಿಮೆಯಾಗಿ ನೋಡುವ, ಹಲವು ಸಂಸ್ಕೃತಿಯ ಮಿಶ್ರ ಪಾಕದಲ್ಲಿರುವ ತಲೆಮಾರು ನನಗೆ ಸದಾ ಕಾಡುವ ಸಂಗತಿ. ಜಾಗತೀಕರಣ ಹೇಗೆ ಯಾವುದೇ ಕಾಸ್ಮೆಟಿಕ್ಸ್ ಬಳಸದೆ ಎಲ್ಲರ ಬಣ್ಣ ಬದಲಿಸುತ್ತದೆ ಎನ್ನುವುದು ಕ್ರಮೇಣ ನಮ್ಮ ಅಡುಗೆ ಕೋಣೆಗಳಲ್ಲೂ ಬದಲಾಗುತ್ತಿರುವ ಭಾಷೆ, ಊಟ, ಲೋಟ ಎಲ್ಲವೂ ಹೇಳುತ್ತಿವೆ.

ಟೆಕ್ ಲೋಕದ ಏಣಿ ಇಟ್ಟುಕೊಂಡು ಸುಲಭವಾಗಿ ಜಾಗತೀಕರಣದ ‘ಕ್ಲೌಡ್’ನ ಭಾಗವಾಗಿಹೋಗಬಹುದಾದ ಹುಡುಗ ತನ್ನ ಕೈಯಲ್ಲಿ ಕವಿತೆ ಹಿಡಿದು ನಿಂತಿದ್ದಾನೆ. ಎನ್ನುವುದೇ ಒಂದು ಅಚ್ಚರಿಯ ಸಂಗತಿ. ತನ್ನೊಳಗೆ ಓಡಾಡಿದ ನಗರಗಳನ್ನು, ತನ್ನೊಳಗೆ ಹಾದು ಹೋದ ಭಾಷೆಗಳನ್ನು, ತನ್ನೊಳಗೆ ಅಡಗಿ ಕೂತ ಸಂಸ್ಕೃತಿಗಳನ್ನು ತಾನು ಕಳೆದು ಹೋದದ್ದನ್ನು, ತನ್ನ ಅನಾಥಥೆಯನ್ನು ಆಕರ್ಷ ಕವಿತೆಯಾಗಿಸಿದ್ದಾನೆ.

‘ನಿಮ್ಮ ಹೆಸರುಗಳನ್ನೇ ಶೀರ್ಷಿಕೆಯಾಗಿಸಿ ಕವಿತೆಯಾಗಿಸುತ್ತೇನೆ’ ಎನ್ನುತ್ತಾನೆ ಆಕರ್ಷ. ಈ ಕವನ ಸಂಕಲನದಲ್ಲಿ ಓಡಾಡಿದರೆ ಸಾಕು ಜಗತ್ತಿನ ವಿಶಾಲ ಕ್ಯಾನ್ ವಾಸ್ ನಲ್ಲಿ ಕಳೆದು ಹೋಗುವ ಅನುಭವ. ಆತ ಹೇಳಿದಂತೆ ಈ ಸಂಕಲನದಲ್ಲಿನ ಕವಿತೆಗಳಿಗೆ ನಮ್ಮ ಗುರುತನ್ನೇ ಕೊಟ್ಟುಕೊಳ್ಳಬಹುದು.

ಭವಿಷ್ಯದ ಕವಿತೆಗಳು ಚಿಕ್ಕದಾಗಿರುತ್ತವೆ/ ಅವಕ್ಕೆ ಬೃಹತ್ ಬ್ಯಾಟರಿಗಳ ಅಥವಾ ವಿಶಿಷ್ಟ ತಂತುಗಳ ಅವಶ್ಯವಿರುವುದಿಲ್ಲ/ ಭವಿಷ್ಯದ ಕವಿತೆ ತನ್ನನ್ನು ತಾನೇ ಬರೆದುಕೊಳ್ಳುತ್ತದೆ/ ಡಿಜಿಟಲ್ ಪ್ರೋಗ್ರಾಮಿನ ಸಹಾಯದಿಂದ / ತೊಡಕುಗಳಿಲ್ಲದೆ ತಿಂಗಳುಗಟ್ಟಲೆ ಚಲಿಸುತ್ತದೆ/ ಆಧುನಿಕ ವಸ್ತುಗಳಿಂದ / ವಿಶಿಷ್ಟ ಲೋಹಗಳಿಂದ ತಯಾರಿಸಲ್ಪಟ್ಟಿರುತ್ತದೆ/ ಭವಿಷ್ಯದ ಕವಿತೆ ನೂರಾರು ಆಕಾರಗಳಲ್ಲಿ/ ಬಣ್ಣಗಳಲ್ಲಿ ಲಭ್ಯವಿರುತ್ತದೆ… ಎಂದೇ ಅಂದುಕೊಂಡು ಒಳಗೊಳಗೇ ಗಾಬರಿಪಟ್ಟುಕೊಳ್ಳುತ್ತಿದ್ದಾಗ ಆಕರ್ಷನ ಕವಿತೆಗಳು ‘ಅಮೆರಿಕನ್‌ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪಿ’ನಂತೆ ಕಂಡು ನಿರಾಳ ಉಸಿರು ಬಿಡುವಂತೆ ಮಾಡಿದೆ.

ಹೊಸ ತಲೆಮಾರಿನ ಕವಿತೆಗಳು ಹೇಗಿರುತ್ತವೆ ಎನ್ನುವುದು ಗೊತ್ತಾಗಬೇಕಾದರೆ ನೀವೂ ಈ ಗ್ರಾಫಿಟಿಯ ಹೂವನ್ನು ಕೈಗೆತ್ತಿಕೊಳ್ಳಬೇಕು.