ಇದು ‘ಮಾವಲಿ ಮಿರ್ಚಿ’

ನಾನು ಮತ್ತು ಶಿವಕುಮಾರ ಮಾವಲಿ ಕೈಕುಲುಕಿದ್ದು ಒಂದು ಹೆಸರಿನ ಮೂಲಕ ಎಂದರೆ ನೀವು ನಂಬಬೇಕು! ‘ದೇವರು ಅರೆಸ್ಟ್ ಆದ’ ಎನ್ನುವ ಹೆಸರಿನ ಕಥಾ ಸಂಕಲನ ಸಾದರ ಸ್ವೀಕಾರಗಳಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ನಿಂತು ಮತ್ತೆ ಆ ಹೆಸರನ್ನು ಓದಿಕೊಂಡಿದ್ದೆ. ಬರೆದವರ ಹೆಸರಿಗಿಂತಲೂ ಕಥಾ ಸಂಕಲನದ ಹೆಸರು ಹಿಡಿದು ಜಗ್ಗಿತ್ತು. ಆಮೇಲೆ ನಮ್ಮ ‘ಅವಧಿ’ಯಲ್ಲೇ ಪ್ರಕಟವಾದ ಪಿ ಚಂದ್ರಿಕಾ ಅವರ ‘ಚಿಟ್ಟಿ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಶಿವಕುಮಾರ ಮಾವಲಿ ಬಂದು ತಮ್ಮನ್ನು ಪರಿಚಯಿಸಿಕೊಂಡಾಗ ನನಗೆ ಗೊತ್ತಿಲ್ಲದಂತೆ ‘ದೇವರು ಅರೆಸ್ಟ್ ಆದ’ ಎನ್ನುವ ಉದ್ಘಾರ ಹೊರಬಿದ್ದಾಗಿತ್ತು.

ಹಾಗೆ ಪರಿಚಯವಾದ ಮಾವಲಿ ಅವರನ್ನು ಬಲವಂತವಾಗಿ ಅರೆಸ್ಟ್ ಮಾಡಿ ‘ಅವಧಿ’ಯ ಅಂಗಳದಲ್ಲಿ ಕೂಡಿಸಿದೆ. ಅದರ ಪರಿಣಾಮವೇ ಅವರ ಈ ಕಥಾ ಸಂಕಲನ ‘ಟೈಪಿಸ್ಟ್ ತಿರಸ್ಕರಿಸಿದ ಕಥೆ’.

ಶಿವಕುಮಾರ ಮಾವಲಿ ಅವರಿಗೆ ಅಂಕಣ ಬರೆಯಿರಿ ಎಂದೆ. ಅವರು ಕಥೆ ಬರೆದರು. ‘ಮಾವಲಿ ಮಿರ್ಚಿ’ ಎನ್ನುವ ಹೆಸರಿನಲ್ಲಿ ಆರಂಭವಾದ ಅಂಕಣ ಬೇಕಿದ್ದವರಿಗೆ ಕಥೆ ಅನಿಸಿತು, ಉಳಿದವರಿಗೆ ಅಂಕಣ ಎಂದೇ ಅನಿಸಿತು. ಆ ರೀತಿ ಕಥೆಯ ವಿನ್ಯಾಸವನ್ನು ಮುರಿದು ಕಟ್ಟುತ್ತಿರುವವರ ಪೈಕಿ ಮಾವಲಿ ಮುಖ್ಯರು. ಒಂದು ತಲೆಮಾರು ಎನ್ನುವುದು ಈಗ ದೊಡ್ಡ ಕಾಲವೇನಲ್ಲ. ಮಾಧ್ಯಮಗಳ ನಾಗಾಲೋಟದಿಂದ, ಜಾಗತೀಕರಣದ ರಭಸ ಸೆಳೆತದಿಂದ ಆಲೋಚನೆ, ಬದುಕಿನ ವಿಧಾನ ಪರದೆಯ ಮೇಲಿನ ಗೊಂಬೆ ಸರಿದಷ್ಟೇ ವೇಗದಲ್ಲಿ ಸರಿಯುತ್ತಿದೆ. ಅಂತಹ ಜಗತ್ತೇ ತಮ್ಮ ಮನೆ ಎಂದು ಭಾವಿಸಿದ, ಒಂದು ನೆಲೆ ಎನ್ನುವುದನ್ನೇ ನಿರಾಕರಿಸುತ್ತಿರುವ ತಲೆಮಾರು ಯೋಚಿಸುತ್ತಿರುವ ರೀತಿ, ಬದುಕುತ್ತಿರುವ ವಿಧಾನ ಕ್ರಮೇಣ ಸೃಜನಶೀಲ ಕೃತಿಗಳಲ್ಲೂ ತಮ್ಮ ನೆಲೆ ಕಂಡುಕೊಳ್ಳುತ್ತಿವೆ.

ಶಿವಕುಮಾರ ಮಾವಲಿ ಅವರಿಗೆ ಇರುವ ಗ್ರಹಣ ಶಕ್ತಿ ವಿಶಿಷ್ಟವಾದದ್ದು. ಅವರು ತಮ್ಮ ಇಡೀ ಮೈಗೆ ಕಣ್ಣುಗಳನ್ನು ಹಚ್ಚಿಕೊಂಡಿದ್ದಾರೇನೋ ಎನ್ನುವಂತೆ ಸುತ್ತಲಿನ ಎಲ್ಲವನ್ನೂ ಗಮನಿಸುತ್ತಾರೆ. ಹಾಗೆ ಗಮನಿಸಿದ್ದು ಇವರೊಳಗೆ ಬಿದ್ದ ಬೀಜಗಳೇನೋ ಎನ್ನುವಂತೆ ಕುಡಿಯೊಡೆದು ಕಥೆಗಳಾಗಿ ಅರಳುತ್ತವೆ. ಇಂದಿನ ಮಾಧ್ಯಮ, ಇಂದಿನ ಜನಾಂಗ, ಇಂದಿನ ಆಲೋಚನೆಯನ್ನು ಅವರು ಇಲ್ಲಿನ ಕಥೆಗಳಲ್ಲಿ ಕಟ್ಟಿಕೊಟ್ಟಿರುವ ಬಗೆ ಬಹುಷಃ ಕ್ರಮೇಣ ಕಥೆಗಳ ವಿಧಾನವನ್ನು ಭಿನ್ನ ದಿಕ್ಕಿಗೆ ಕೊಂಡೊಯ್ಯಬಲ್ಲವು.

ಶಿವಕುಮಾರ ಮಾವಲಿ ಅವರೊಳಗೊಬ್ಬ ಪುಟಿಯುವ ತುಂಟನಿದ್ದಾನೆ. ಉತ್ಸಾಹದ ಬುಗ್ಗೆಯಿದೆ. ಹಾಗಾಗಿಯೇ ಮಾವಲಿ ಅವರ ಕಥೆಗಳಿಗೆ ವಿಶಿಷ್ಟ ಆಯಾಮ ಸಿಕ್ಕಿಹೋಗುತ್ತದೆ. ಅವರು ಕಥೆಯನ್ನು ಕಟ್ಟುತ್ತಾರೋ ಇಲ್ಲವೇ ಎದುರಿಗಿದ್ದುದನ್ನೇ ಕಥೆಯಾಗಿ ತಿದ್ದಿಬಿಡುತ್ತಾರೋ ಎಂದು ವಿಸ್ಮಯಪಡುವಂತೆ ನಮ್ಮ ಆಜುಬಾಜಿನಲ್ಲಿ ನಡೆಯುವ ಪ್ರತಿಯೊಂದಕ್ಕೂ ತಮ್ಮ ಸ್ಪರ್ಶ ನೀಡುತ್ತಾರೆ.

ಶಿವಕುಮಾರ ಮಾವಲಿ ಸಾಕಷ್ಟು ವರ್ಷಗಳಿಂದ ರಂಗಭೂಮಿಯ ಸಖ್ಯ ಹೊಂದಿರುವವರು. ಜೊತೆಗೆ ಪತ್ರಿಕೋದ್ಯಮವನ್ನು ಸನಿಹದಿಂದ ಕಂಡವರು. ಇದೇ ಕಾರಣಕ್ಕೂ ಇರಬಹುದು ಅವರ ಕಥೆಗಳಿಗೆ ನಾಟಕೀಯ ತಿರುವು ಸಿಕ್ಕುತ್ತದೆ. ನಾಟಕೀಯ ಎಳೆಗಳು ಕಥೆಯಾಗಿ ಮೈ ಬದಲಿಸುತ್ತವೆ. ಅಂದಂದಿನ ವಿದ್ಯಮಾನಗಳು ಇವರೊಳಗೆ ಓಲಾಡಿ ಕಥೆಯಾಗಿ ಎದ್ದು ನಿಲ್ಲುತ್ತವೆ.

ಶಿವಕುಮಾರ ಮಾವಲಿ ಅವರು ಇಂದಿನ ಕಾಲದ ಕಥನಕಾರ ಎಂದರೂ ತಪ್ಪಿಲ್ಲ. ಇವರ ಕಥೆಗಳು ಕಥೆಗಳನ್ನು ಮಾತ್ರ ಮುಂದಿಡುತ್ತಿಲ್ಲ ಬದಲಿಗೆ ಇಂದಿನ ಕಾಲದ ಉಸಿರಾಟವನ್ನು ನಮಗೆ ದಾಟಿಸುತ್ತಿವೆ. ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಶಿವಕುಮಾರ ಮಾವಲಿ ಎಂಬ ನಿಂತ ನೀರಲ್ಲದ ಮನಕ್ಕೆ ಕೈಯಿಟ್ಟ ಕಡೆಯೆಲ್ಲಾ ಕಥೆ ಎಂಬ ಅಕ್ಷಯ ಪಾತ್ರೆ.