ಅಮೆರಿಕನ್‌ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು..

ತನ್ನ ಹೆಸರಿನ ಜೊತೆಗೆ ಸಾಕ್ಷಾತ್ ಶ್ರವಣ ಕುಮಾರನಂತೆ ತನ್ನ ತಂದೆ ತಾಯಿಯರ ಹೆಸರನ್ನು ಹೊತ್ತೇ ಸಾಗುವ ಆಕರ್ಷ ಸದಾ ನನ್ನ ಕುತೂಹಲದ ಕೇಂದ್ರ. ಕುಳಿತ ಕಡೆ ಕುಳಿತುಕೊಳ್ಳದ, ಯಾವುದೋ ಒಂದು ಅವಸರದಲ್ಲಿರುವಂತೆ ಹೆಜ್ಜೆ ಹಾಕುವ, ಒಂದೇ ಬಾರಿಗೆ ಎಲ್ಲಾ ಮಾತನ್ನು ಮುಂದೆ ಸುರಿದು ಬಿಡಬೇಕು.. ಎನ್ನುವ ಧಾವಂತದ ಈ ಹುಡುಗನ ಒಳಗೆ ಒಂದು ‘ಗ್ರಾಫಿಟಿಯ ಹೂ’ವಿರಬಹುದು ಎಂದು ನನಗೆ ಗೊತ್ತೇ ಇರಲಿಲ್ಲ.

ಫ್ರಾನ್ಸ್, ಅಮೇರಿಕಾ, ಸ್ವಿಡ್ಜರ್ ಲ್ಯಾಂಡ್ ಗಳಲ್ಲಿ ಉಸಿರಾಡಿ ಬಂದ ಆಕರ್ಷನಿಗೆ ಬದುಕು, ಭಾಷೆ ಎಲ್ಲವೂ ಒಂದು ಗ್ರಾಫಿಟಿಯ ಹೂವಾಗಿಯೇ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಬದುಕಿಗೆ ಗಡಿ ಗೋಡೆಗಳನ್ನು ಕಟ್ಟಿಕೊಳ್ಳದ, ಗ್ರೀನ್ ವಿಚ್ ಮೀನ್ ಟೈಮ್ ನಿಂದ ಸಮಯ ಅಳೆಯದ, ಕಾಫಿ ಕಪ್ಪಿನೊಳಗಿನ ಕಡು ಬಣ್ಣದ ಮೂಲಕ ರುಚಿ ಅಳೆಯದ ಒಂದು ತಲೆಮಾರು ತಲೆ ಎತ್ತಿದೆ.

‘ಸಿಟಿಜನ್’ ಎನ್ನುವ ಕಲ್ಪನೆ ದೂರವಾಗಿ ‘ನೆಟಿಜನ್’ ಎನ್ನುವುದು ವಾಸ್ತವವಾಗುತ್ತಿರುವ ಕಾಲದ ತಲೆಮಾರು ಇದು. ಒಂದು ದೇಶಕ್ಕೆ ಜೋತು ಬೀಳದ, ಒಂದೇ ಭಾಷೆ ಎನ್ನುವುದನ್ನು ಕೀಳರಿಮೆಯಾಗಿ ನೋಡುವ, ಹಲವು ಸಂಸ್ಕೃತಿಯ ಮಿಶ್ರ ಪಾಕದಲ್ಲಿರುವ ತಲೆಮಾರು ನನಗೆ ಸದಾ ಕಾಡುವ ಸಂಗತಿ. ಜಾಗತೀಕರಣ ಹೇಗೆ ಯಾವುದೇ ಕಾಸ್ಮೆಟಿಕ್ಸ್ ಬಳಸದೆ ಎಲ್ಲರ ಬಣ್ಣ ಬದಲಿಸುತ್ತದೆ ಎನ್ನುವುದು ಕ್ರಮೇಣ ನಮ್ಮ ಅಡುಗೆ ಕೋಣೆಗಳಲ್ಲೂ ಬದಲಾಗುತ್ತಿರುವ ಭಾಷೆ, ಊಟ, ಲೋಟ ಎಲ್ಲವೂ ಹೇಳುತ್ತಿವೆ.

ಟೆಕ್ ಲೋಕದ ಏಣಿ ಇಟ್ಟುಕೊಂಡು ಸುಲಭವಾಗಿ ಜಾಗತೀಕರಣದ ‘ಕ್ಲೌಡ್’ನ ಭಾಗವಾಗಿಹೋಗಬಹುದಾದ ಹುಡುಗ ತನ್ನ ಕೈಯಲ್ಲಿ ಕವಿತೆ ಹಿಡಿದು ನಿಂತಿದ್ದಾನೆ. ಎನ್ನುವುದೇ ಒಂದು ಅಚ್ಚರಿಯ ಸಂಗತಿ. ತನ್ನೊಳಗೆ ಓಡಾಡಿದ ನಗರಗಳನ್ನು, ತನ್ನೊಳಗೆ ಹಾದು ಹೋದ ಭಾಷೆಗಳನ್ನು, ತನ್ನೊಳಗೆ ಅಡಗಿ ಕೂತ ಸಂಸ್ಕೃತಿಗಳನ್ನು ತಾನು ಕಳೆದು ಹೋದದ್ದನ್ನು, ತನ್ನ ಅನಾಥಥೆಯನ್ನು ಆಕರ್ಷ ಕವಿತೆಯಾಗಿಸಿದ್ದಾನೆ.

‘ನಿಮ್ಮ ಹೆಸರುಗಳನ್ನೇ ಶೀರ್ಷಿಕೆಯಾಗಿಸಿ ಕವಿತೆಯಾಗಿಸುತ್ತೇನೆ’ ಎನ್ನುತ್ತಾನೆ ಆಕರ್ಷ. ಈ ಕವನ ಸಂಕಲನದಲ್ಲಿ ಓಡಾಡಿದರೆ ಸಾಕು ಜಗತ್ತಿನ ವಿಶಾಲ ಕ್ಯಾನ್ ವಾಸ್ ನಲ್ಲಿ ಕಳೆದು ಹೋಗುವ ಅನುಭವ. ಆತ ಹೇಳಿದಂತೆ ಈ ಸಂಕಲನದಲ್ಲಿನ ಕವಿತೆಗಳಿಗೆ ನಮ್ಮ ಗುರುತನ್ನೇ ಕೊಟ್ಟುಕೊಳ್ಳಬಹುದು.

ಭವಿಷ್ಯದ ಕವಿತೆಗಳು ಚಿಕ್ಕದಾಗಿರುತ್ತವೆ/ ಅವಕ್ಕೆ ಬೃಹತ್ ಬ್ಯಾಟರಿಗಳ ಅಥವಾ ವಿಶಿಷ್ಟ ತಂತುಗಳ ಅವಶ್ಯವಿರುವುದಿಲ್ಲ/ ಭವಿಷ್ಯದ ಕವಿತೆ ತನ್ನನ್ನು ತಾನೇ ಬರೆದುಕೊಳ್ಳುತ್ತದೆ/ ಡಿಜಿಟಲ್ ಪ್ರೋಗ್ರಾಮಿನ ಸಹಾಯದಿಂದ / ತೊಡಕುಗಳಿಲ್ಲದೆ ತಿಂಗಳುಗಟ್ಟಲೆ ಚಲಿಸುತ್ತದೆ/ ಆಧುನಿಕ ವಸ್ತುಗಳಿಂದ / ವಿಶಿಷ್ಟ ಲೋಹಗಳಿಂದ ತಯಾರಿಸಲ್ಪಟ್ಟಿರುತ್ತದೆ/ ಭವಿಷ್ಯದ ಕವಿತೆ ನೂರಾರು ಆಕಾರಗಳಲ್ಲಿ/ ಬಣ್ಣಗಳಲ್ಲಿ ಲಭ್ಯವಿರುತ್ತದೆ… ಎಂದೇ ಅಂದುಕೊಂಡು ಒಳಗೊಳಗೇ ಗಾಬರಿಪಟ್ಟುಕೊಳ್ಳುತ್ತಿದ್ದಾಗ ಆಕರ್ಷನ ಕವಿತೆಗಳು ‘ಅಮೆರಿಕನ್‌ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪಿ’ನಂತೆ ಕಂಡು ನಿರಾಳ ಉಸಿರು ಬಿಡುವಂತೆ ಮಾಡಿದೆ.

ಹೊಸ ತಲೆಮಾರಿನ ಕವಿತೆಗಳು ಹೇಗಿರುತ್ತವೆ ಎನ್ನುವುದು ಗೊತ್ತಾಗಬೇಕಾದರೆ ನೀವೂ ಈ ಗ್ರಾಫಿಟಿಯ ಹೂವನ್ನು ಕೈಗೆತ್ತಿಕೊಳ್ಳಬೇಕು.

ನೆಲದ ಅಂತಃಸತ್ವ ಹೀರಿ ಬೆಳೆದಾಗ ಯಶಸ್ಸು: ಅಂಗಾರ

ಸುಳ್ಯ: ಇಂದು ಯಾವ ಕ್ಷೇತ್ರದಲ್ಲೂ ನೆಮ್ಮದಿ ಇಲ್ಲ. ಆದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಮನಕ್ಕೆ ಮುದ ನೀಡುವುದರ ಜತೆ ನಮ್ಮಲ್ಲಿ ಲವಲವಿಕೆ ಹೆಚ್ಚಿಸುತ್ತದೆ. ಈ ನೆಲದ ಅಂತಃಸತ್ವವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬದುಕಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಶಾಸಕ ಎಸ್‌. ಅಂಗಾರ ತಿಳಿಸಿದರು.

ಅವರು ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ಆಯೋಜಿಸಿದ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು.

ಈಟಿವಿ ಸುದ್ದಿವಾಹಿನಿ ಪ್ರಧಾನ ಸಂಪಾದಕ ಜಿ.ಎನ್‌. ಮೋಹನ್‌ ಅವರಿಗೆ ರಂಗಮನೆ ಗೌರವ ಸಮ್ಮಾನ ನೀಡಲಾಯಿತು.

ಜಿ.ಎನ್‌. ಮೋಹನ್‌ ಮಾತನಾಡಿ, ರಂಗಭೂಮಿಯ ಮೇಲೂ ಜಾಗತೀಕರಣ ಪರೋಕ್ಷವಾಗಿ ದಾಳಿ ಮಾಡುತ್ತಿದೆ. ಜಾಗತೀಕರಣ ಮನಸ್ಸು, ನೋಡುವ ಕಣ್ಣಿನ ದೃಷ್ಟಿಯನ್ನು ಬದಲಾಯಿಸಿದೆ. ಇದರಿಂದ ಸೃಜನಶೀಲತೆ ದೂರವಾಗುತ್ತಿದೆ ಎಂದರು.

ಮಂಗಳೂರು ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ರಂಗಭೂಮಿಯಲ್ಲಿ ಜೀವಿಸಿ ಹೊಸತನವನ್ನು ಕಟ್ಟಿಕೊಡಬಹುದು ಎನ್ನುವುದಕ್ಕೆ ಜೀವನ್‌ರಾಂ ಸುಳ್ಯ ಸಾಕ್ಷಿ ಎಂದರು.

ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ , ನ.ಪಂ.ಅಧ್ಯಕ್ಷ ಎನ್‌.ಎ. ರಾಮಚಂದ್ರ, ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ಶುಭ ಹಾರೈಸಿದರು. ಜಯರಾಮ ನಾವೂರು ಉಪಸ್ಥಿತರಿದ್ದರು.

ತನ್ನ ಅನುದಾನದಲ್ಲಿ ರಂಗಮನೆಗೆ ಮೇಲ್ಛಾವಣಿ ಒದಗಿಸಿದ ಶಾಸಕ ಎಸ್‌. ಅಂಗಾರ ಅವರನ್ನು ಸಮ್ಮಾನಿಸಲಾಯಿತು.

ರಂಗಮನೆ ರೂವಾರಿ ಜೀವನ್‌ರಾಂ ಸುಳ್ಯ ಸ್ವಾಗತಿಸಿದರು.

ದೊಡ್ಡಬಳ್ಳಾಪುರದ ಶ್ರೀನಿವಾಸಮೂರ್ತಿ ಅನಿಸಿಕೆ ವ್ಯಕ್ತಪಡಿಸಿದರು. ಅಚ್ಯುತ ಅಟೂÉರು, ಮೌಲ್ಯಜೀವನ್‌, ಡಾ| ವೀಣಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ನಾಲ್ಕು ದಿನಗಳಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆ ಗಾಯನ ಮತ್ತು ಜೀವನ್‌ರಾಂ ನಿರ್ದೇಶನದ ಬರ್ಬರೀಕ’ ನಾಟಕ, ಮಂಟಪ ಪ್ರಭಾಕರ ಉಪಾಧ್ಯಾಯ ತಂಡದವರಿಂದ ಯಕ್ಷಗಾನ, ರಾಣಿಬೆನ್ನೂರು ತಂಡದಿಂದ ಜನಪದಗೀತೆ, ನಾದಸಂಗಮದವರಿಂದ ಕೊಳಲು ಸಿತಾರ್‌ ಜುಗಲ್‌ಬಂಧಿ, ನೃತ್ಯ ನಿಕೇತನ ಕೊಡವೂರು ತಂಡದಿಂದ ನೃತ್ಯಸಿಂಚನ, ಸ್ಥಳೀಯ ಆಯ್ದ ತಂಡಗಳಿಂದ ಜನಪದ ನೃತ್ಯ ವೈಭವ, ಮೈಸೂರಿನ ವಾಣಿ ವೀಣಾ ಸಹೋದರಿಯರಿಂದ ಹರಿಕಥೆ, ಉಡುಪಿಯ ರಂಗಭೂಮಿ ತಂಡದಿಂದ ನಾಟಕ, ಮೈಸೂರಿನ ಶ್ರೀಸರಸ್ವತಿ ವಾದ್ಯವೃಂದದವರಿಂದ ಲಯನಾದ‌ ತರಂಗ, ರಂಗಮನೆ ನಾಟಕ ಶಾಲೆಯ ಮಕ್ಕಳಿಂದ ಮಕ್ಕಳ ಮಾಯಲೋಕ’ ಪ್ರದರ್ಶಿಸಲ್ಪಟ್ಟಿತು.