ಬಹುಮುಖಗಳಲ್ಲಿ ಚಲಿಸುವ ಬದುಕು

“ವೆಂಕಿ ಬರ್ಗರ್”19

20

 

ವೆಂಕಿ

ನ್ಯೂಯಾರ್ಕ್ ಎಂಬ ನಗರಿಗೆ ಎಷ್ಟೊಂದು ವ್ಯಕ್ತಿತ್ವ. ನ್ಯೂಯಾರ್ಕ್ ಎಂಬುದು ಒಬ್ಬೊಬ್ಬರಿಗೂ ಒಂದೊಂದು ರೀತಿಯ ನಗರ. ಅವರವರ ಭಾವಕ್ಕೆ ಮೂಡಿ ನಿಲ್ಲುವ ಮಹಾನಗರಿ. ಎಲ್ಲವೂ ನೇರವಾಗಿ ನನ್ನ ಅನುಭವಕ್ಕೆ ಬಂದಿತು. ಕಾಣದ ರೀತಿಯಲ್ಲಿ ಬೆಸೆದುಕೊಂಡಿರುವ ಮಾನವ ಸಂಬಂಧಗಳಿಗೂ ಸಾಕ್ಷಿ ಒದಗಿಸಿತು.

wtc1.JPG

ಆರು ವರ್ಷಗಳ ಹಿಂದೆ ಸೆಪ್ಟೆಂಬರ್ ೧೧, ನ್ಯೂಯಾರ್ಕ್ ಹಾಗೂ ನ್ಯೂಯಾರ್ಕಿಗರನ್ನು ಇನ್ನಿಲ್ಲದಂತೆ ತಲ್ಲಣಗೊಳಿಸಿತು. ಭಯೋತ್ಪಾದಕರ ನೇರ ಹೊಡೆತಕ್ಕೆ ಸಿಕ್ಕ, ಅವರಿಂದ ಕಾಣದಂತೆ ಜರ್ಜರಿತಗೊಂಡ ಎಷ್ಟೋ ಮಂದಿಗೆ ಅದು ಭಾರವಾದ ವಾರವಾಗಿತ್ತು. ಈ ಘಟನೆಯ ನಂತರದ ಬೆಳವಣಿಗೆಗಳು ಇಡೀ ಜಗತ್ತನ್ನೇ ಬದಲಿಸಿ ಹಾಕಿದೆ. ಕ್ರುದ್ಧಗೊಂಡ ಅಮೆರಿಕ, ಅಫ್ಘಾನಿಸ್ತಾನ ಹಾಗೂ ಇರಾಕಿನಲ್ಲಿ ಯುದ್ಧ ಸಾರಿತು. ಸಾವಿರಾರು ಜೀವಗಳು ಇಲ್ಲವಾದವು. ಜಗತ್ತಿನಾದ್ಯಂತ ತಲ್ಲಣ, ಭೌಗೋಳಿಕ ಭೂಕಂಪ ಉಂಟಾಯಿತು.

wtc2.JPG

ಸೆಪ್ಟೆಂಬರ್ ೧೧ರಂದು ಈ ಕರಾಳ ದಿನದಂದು ಪ್ರಾಣ ತೆತ್ತವರಿಗೆ ಕಂಬನಿ ಮಿಡಿಯಲಾಯಿತು. ಮೊಂಬತ್ತಿಗಳು ಬೆಳಗಿದವು. ಸಂತಾಪ ಸಭೆ ನಡೆಯಿತು. ಈ ಕರಾಳ ದಿನದ ಮೊದಲ ವಾರ್ಷಿಕೋತ್ಸವದಂದು ನ್ಯೂಯಾರ್ಕಿಗೆ ನ್ಯೂಯಾರ್ಕೇ ಸ್ತಬ್ಧಗೊಂಡಿತ್ತು. ಅದಕ್ಕೆ ಹೋಲಿಸಿದರೆ ಕ್ರಮೇಣ ಚಟುವಟಿಕೆ ಕಡಿಮೆಯಾಗುತ್ತಿದೆ. ಆದರೆ ದುರಂತದ ತೀವ್ರತೆ ಮಾತ್ರ ನ್ಯೂಯಾರ್ಕಿಗರ ಮನದಲ್ಲಿ ಹಾಗೇ ಉಳಿದಿದೆ.

ನ್ಯೂಯಾರ್ಕಿಗರಿಗೆ ಕಾಲ ಸದಾ ಚಲಿಸುತ್ತಿರಬೇಕು ಎಂಬುದು ಗೊತ್ತು. ಹಾಗಾಗಿಯೇ ಸಪ್ಟೆಂಬರ್ ೧೧ರ ವಾರವೂ ನ್ಯೂಯಾರ್ಕ್ ಹಲವು ಚಟುವಟಿಕೆಗಳ ಆಗರವಾಗಿತ್ತು. ಆ ವಾರ ನ್ಯೂಯಾರ್ಕಿನಲ್ಲಿ ಫ್ಯಾಷನ್ ವೀಕ್. ಕಾಲ್ವಿನ್ ಕೀನ್, ಮಾರ್ಕ್ ಜೇಕಬ್ ರಂತಹ ಘಟಾನುಘಟಿ ವಿನ್ಯಾಸಕಾರರು ತಮ್ಮ ಇತ್ತೀಚಿನ ಡಿಸೈನುಗಳನ್ನು ರಂಗಕ್ಕೇರಿಸಿದರು. ಮಾಡೆಲ್ ಗಳು ಸ್ಟೈಲಿಷ್ ಉಡುಪು ಧರಿಸಿ, ಜಗತ್ತೇ ತಮ್ಮನ್ನು ಅನುಕರಿಸಲಿ ಎಂಬಂತೆ ಬಿನ್ನಾಣದ ನಡಿಗೆ ಹಾಕಿದರು. ಟೆನ್ನಿಸ್ ತಾರೆಯರು, ಹಾಲಿವುಡ್ ನಟನಟಿಯರು, ಪ್ರಖ್ಯಾತ ಮಾಡೆಲ್ ಗಳು ಈ ಪ್ರದರ್ಶನದಲ್ಲಿ ಹಿಂದೆ ಬೀಳಲಿಲ್ಲ. ಮುಂದಿನ ಒಂದು ವರ್ಷದುದ್ದಕ್ಕೂ ಮನೆಮಾತಾಗಲಿರುವ ಡಿಸೈನುಗಳನ್ನು ಧರಿಸಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇನ್ನೊಂದೆಡೆ ಅಷ್ಟೇನೂ ಫೇಮಸ್ ಅಲ್ಲದ ವಿನ್ಯಾಸಕಾರರು ಈ ವಿನ್ಯಾಸಗಳನ್ನು ಕಾಪಿ ಮಾಡಿ ಕಡಿಮೆ ಬೆಲೆಯಲ್ಲಿ ಮಾರಾಟಕ್ಕಿಡುವಲ್ಲಿ ಬ್ಯುಸಿಯಾಗಿದ್ದರು. ಇದು ನ್ಯೂಯಾರ್ಕಿಗಷ್ಟೇ ಸೀಮಿತವಾಗಿರಲಿಲ್ಲ. ನ್ಯೂಯಾರ್ಕ್ ಫ್ಯಾಷನ್ ಲೋಕ ಹೊಸದನ್ನು ಕಾಣುತ್ತಿದ್ದಂತೆಯೇ ದೂರದ ಜೈಪುರ, ದೆಹಲಿ, ಹೈದ್ರಾಬಾದಿನ ಟೈಲರ್, ಡಿಸೈನರುಗಳು ಬ್ಯುಸಿಯಾಗಿ ಹೋದರು. ಇಮೇಲ್ ನಲ್ಲಿ ಕದ್ದು ಬಂದಿಳಿದ ವಿನ್ಯಾಸಗಳು ರಾತ್ರೋರಾತ್ರಿ ಪುನರ್ ಸೃಷ್ಟಿಯಾದವು. ಅಷ್ಟೇ ಅಲ್ಲ, ಅದೇ ನ್ಯೂಯಾರ್ಕಿಗೆ ಈ ಎಲ್ಲವನ್ನೂ ಸಾಗಿಹಾಕಲಾಯಿತು. ಸಂತೆಯಲ್ಲಿ ಗುಡ್ಡೆ ಬಾಳೆಹಣ್ಣು ಮಾರುವ ದರದಲ್ಲಿ ಮಾರಿಹಾಕಲು.

ನ್ಯೂಯಾರ್ಕಿನ ಇನ್ನೊಂದು ಮಗ್ಗುಲಲ್ಲೂ ಬದುಕು ತನ್ನದೇ ಆದ ರೀತಿಯಲ್ಲಿ ಅಣಿಗೊಳ್ಳುತ್ತಿತ್ತು. ನ್ಯೂಯಾರ್ಕಿನ ಅತಿ ದೊಡ್ಡ ಸಮೂಹವಾದ ಯಹೂದಿಗಳು ರೋಶ್ ಹಷಾನಾ ಎಂಬ ತಮ್ಮ ಹೊಸ ವರ್ಷವನ್ನು ಬರಮಾಡಿಕೊಂಡರು. ನ್ಯೂಯಾರ್ಕಿನ ರಸ್ತೆಗಳು ಯಹೂದಿಗಳ ಕುಟುಂಬದಿಂದ ಸಂಭ್ರಮವನ್ನು ಲೇಪಿಸಿಕೊಂಡವು. ಎಷ್ಟೋ ಶಾಲೆಗಳಿಗೆ ಎರಡೆರಡು ದಿನ ರಜೆ. ಮಕ್ಕಳ ಹಾರಾಟಕ್ಕೆ ಇನ್ನೂ ಎರಡು ರೆಕ್ಕೆ. ಈ ಮಧ್ಯೆಯೇ ಉಪವಾಸದ ತಿಂಗಳಲ್ಲಿ ಮುಸ್ಲಿಮರು ನೀಡುವವನನ್ನು ಪ್ರಾರ್ಥಿಸುತ್ತಿದ್ದರು.

ನ್ಯೂಯಾರ್ಕ್ ಎಷ್ಟು ವಿಚಿತ್ರ! ದಿನದ ಬದುಕಲ್ಲಿ ದ್ವೀಪಗಳಂತೆ ಬದುಕಲು ನಾವು ಎಷ್ಟೊಂದು ಕಾಣದ ಕೈಗಳಿಂದ ಬಂಧಿತರಾಗಿದ್ದೇವೆ!

ಚಿತ್ರಗಳು: ಜಿ ಎನ್ ಮೋಹನ್

ನೋಡಿ ಸ್ವಾಮಿ, ನಾವಿರೋದೇ ಹೀಗೆ…

“ಶಿವಾ ಮಡಗಿದಂಗಿರು” ಅಂತಾರೆ.

ಎಲ್ಲರೂ ಹೀಗೆ ಮಡಗಿದಂಗಿರೋದು ಅವರವರ ಸ್ವಂತ ಚರಿತ್ರೆಗಳಲ್ಲಿ ಮಾತ್ರ. ಅಂದರೆ ಪ್ರೊಫೈಲುಗಳಲ್ಲಿ. ಮೊನ್ನೆ ಒಂದಿಷ್ಟು ಪುಸ್ತಕ ಎದುರಿಗಿಟ್ಟುಕೊಂಡು ಕೂತಾಗ ಯಾಕೋ ಈ ಪ್ರೊಫೈಲುಗಳ ಕಡೆ ಮನಸ್ಸು ಹೊರಳಿತು. ಇದಕ್ಕಾಗಿ ಕನ್ನಡದ ಹಲವು ಬ್ಲಾಗುಗಳನ್ನೂ ಹೊಕ್ಕಿ ಬಂದದ್ದಾಯಿತು. ಲೇಖಕರು, “ಬ್ಲಾಗಿ”ಗಳು ಬರೆದುಕೊಂಡ ತಮ್ಮ ಪ್ರೊಫೈಲುಗಳ ವೈವಿಧ್ಯಗಳು ಗೊತ್ತಾದವು. ಹೊಸದಾಗಿ ಓದಿದ್ದರ ಜೊತೆಗೆ ಮುಂಚೆ ಓದಿದ್ದ ಕೆಲವು ಕೂಡ ಧುತ್ತನೆ ನೆನಪಿನ ಜಗುಲಿಯಲ್ಲಿ ಬಂದು ಪೋಸು ಕೊಟ್ಟವು. ಅವುಗಳಲ್ಲಿ ಕೆಲವಂತೂ ಬಲು ಇಷ್ಟವಾದವು. ಅಂಥವುಗಳಲ್ಲಿ ಮೂರನ್ನು ಇಲ್ಲಿ ಒಟ್ಟಿಗೆ ಕೊಡ್ತಿದ್ದೇವೆ. ಇದು, ಅವುಗಳ  ಅಪೀಲ್ ಆಗೋ ಗುಣ ಮತ್ತು ನಾಚದೆ, ಮರೆಮಾಚದೆ ಬಾಜೂ ಬಂದು ಕೂತು “ನಾ ಇಷ್ಟೆ” ಎಂದು ಒಪ್ಪಿಸಿಕೊಳ್ಳುವ ಅಂತರಂಗ ಶುದ್ಧಿ ಗುಣಕ್ಕಾಗಿ.

ನಾವು ಆಯ್ದುಕೊಂಡ ಮೊದಲನೇ ಪ್ರೊಫೈಲು ರವಿ ಬೆಳಗೆರೆ ಅವರದು. “ಅಫಿಡವಿಟ್ಟು” ಎಂಬ ಇಂಟರೆಸ್ಟಿಂಗ್ ಆದ ಹೆಸರಿಂದ ಹಿಡಿದು “ಅನ್ ಇಂಟರೆಸ್ಟಿಂಗ್” ಅನ್ನೋ ಕಡೇ ಶಬ್ದದವರೆಗೂ ಇದು ಡಿಫರೆಂಟಾಗಿದೆ. ನಾವು ಅವರ ಈ ಪ್ರೊಫೈಲನ್ನು ಎತ್ತಿಕೊಂಡಿರೋದು ೨೦೦೨ರಲ್ಲಿ ಪ್ರಕಟವಾದ ಪುಸ್ತಕವೊಂದರಿಂದ. ಅವರ ಆಗಿನ ವಯಸ್ಸು ೪೪. ಇರಲಿ. ಅವರ ವಯಸ್ಸು ೪೪ನ್ನು ದಾಟಿದೆ ಅಂತಾ ಹೇಳೋರಾದ್ರೂ ಯಾರು? ಆದ್ರೂ ಇರ್ಲಿ, ಗೊಂದಲಕ್ಕೆ ಬೀಳದ ಹಾಗೆ ಓದುಗರಿಗೆ ಪಕ್ಕಾ ಲೆಕ್ಕ ಸಿಗ್ಲಿ ಅನ್ನೋ ಒಂದೇ ಒಂದು ಸದುದ್ದೇಶದಿಂದ ಆ ಇನ್ಫರ್ಮೇಷನ್ನನ್ನೂ ಇಲ್ಲಿ ಅಂಟಿಸಿದ್ದೇವೆ.

ಎರಡನೇ ಪ್ರೊಫೈಲು ಜಿ ಎನ್ ಮೋಹನ್ ಅವರದು. ಕ್ಯೂಬಾದ ಬಗ್ಗೆ ಬರೆವಾಗ ಎಂಥ ಕಾವ್ಯಾತ್ಮಕತೆಯಿಂದ ಆ ಕಥೆ ಹೇಳುವ, ಕಾವ್ಯದಲ್ಲಿ ಗಾಂಭೀರ್ಯದ ಮುದ್ರೆ ಮೂಡಿಸುವ ಸಹಜ ಕೌಶಲ್ಯ ಅವರಿಗಿದೆ. ಹೌದೊ ಅಲ್ಲವೊ ಅನ್ನುವ ಹಾಗೆ ಹಾಸ್ಯವನ್ನೂ ಹಚ್ಚಿ ಪರಿಣಾಮಕಾರಿಯಾಗಿ ಬರೆಯಬಲ್ಲರು ಎಂಬುದಕ್ಕೆ ಈ ಪ್ರೊಫೈಲು ಒಂದು ಪ್ರೂಫ್. ಇದರ ಜೊತೆಗೆ ಅವರ ಮಗಳು ಕಿನ್ನರಿ ಬರೆದಿರುವ ಅವರದೇ ಚಿತ್ರವಿದೆ.

ಕಡೆಯದು ಸುಶ್ರುತ ದೊಡ್ಡೇರಿ ಎಂಬ ಮಿತ್ರರದು. ನಾವು ಮಾಡಿಕೊಂಡ ವರ್ಗೀಕರಣದ ಪ್ರಕಾರ, ಮೊದಲ ಇಬ್ಬರು ಲೇಖಕರಾದರೆ ಇವರು ಪಕ್ಕಾ ಬ್ಲಾಗಿ. “ಮೌನಗಾಳ” ಎಂಬ ಸ್ವಂತ ಬ್ಲಾಗ್ ಅಲ್ಲದೆ, ಮಿತ್ರರ ಜೊತೆ ಸೇರಿ “ಮೋಟುಗೋಡೆಯಾಚೆ ಇಣುಕಿ” ಎಂಬ ಮುದ್ದು ಬರುವಂತಿಪ್ಪ, “ಥೂ, ಎಂಥಾ ಪೋಲಿ!” ಎಂದು ಬೆನ್ನು ತಟ್ಟಿಸಿಕೊಳ್ಳಬಲ್ಲಂಥ ಒಂದು ಬ್ಲಾಗನ್ನೂ ಮೆಂಟೈನ್ ಮಾಡ್ತಿದ್ದಾರೆ.

ಇಷ್ಟು ಸಾಕು. ಮುಂದಿರುವುದು ನೀವೂ ಮೂರು ಪ್ರೊಫೈಲುಗಳೂ.

————————————————————————

ಅಫಿಡವಿಟ್ಟು

ravibelagere.jpgರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮಸಂತೋಷ ದುಡಿದುಕೊಳ್ಳಲು ತೀರ್ಮಾನಿಸಿದಂತೆ ಬದುಕುತ್ತಿರುವವನು ನಾನು. ಬರವಣಿಗೆ ಬಿಟ್ಟು ಬೇರೆ ಏನನ್ನೂ ಮಾಡಲು ನನಗೆ ಬಾರದು ಅಂತ ತೀರ್ಮಾನಿಸಿ ಆಗಿದೆ.

ನನಗೀಗ ನಲವತ್ನಾಲ್ಕು ವರ್ಷ ವಯಸ್ಸು. ಹುಟ್ಟಿದ್ದು ೧೯೫೮ರ ಮಾರ್ಚ್ ೧೫ರಂದು, ಬಳ್ಳಾರಿಯಲ್ಲಿ. ಎರಡು ವರ್ಷ ತುಮಕೂರಿನ ಸಿದ್ಧಗಂಗಾ ಹೈಸ್ಕೂಲಿನಲ್ಲಿ ಓದಿದುದನ್ನು ಬಿಟ್ಟರೆ ಬಿ.ಎ.ವರೆಗಿನ ವ್ಯಾಸಂಗ ನಡೆದದ್ದು ಬಳ್ಳಾರಿಯಲ್ಲಿ. ನಂತರ ಓದಿದ್ದು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ; ಧಾರವಾಡದಲ್ಲಿ. ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳ್ಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದಕ್ಕೆ ಮುಂಚೆ ಮತ್ತು ಅದರ ನಂತರ ಸರಿಸುಮಾರು ಒಂಬತ್ತು ವೃತ್ತಿ ಬದಲಿಸಿದೆ. ಹೈಸ್ಕೂಲು ಮೇಷ್ಟ್ರು, ಹೊಟೇಲ್ ಮಾಣಿ, ರೂಮ್ ಬಾಯ್, ರಿಸೆಪ್ಶನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ನ ಮಾಲಿಕ, ಥೇಟರಿನಲ್ಲಿ ಗೇಟ್ ಕೀಪರ್, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು – ಹೀಗೆ ನಾನಾ ಕಡೆ ಮೈಕೈ ಮೆತ್ತಗಾಗಿಸಿಕೊಂಡು ದುಡಿದೆ. ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಬರೆದೆ. ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದೆ. ತುಂಬ ಚಿಕ್ಕ ವಯಸ್ಸಿಗೇ ನನಗಿಂತ ಜಾಸ್ತಿ ವಯಸ್ಸಾದ ಪತ್ರಿಕೆಗಳಿಗೆ ಸಂಪಾದಕನಾದೆ. ಈತನಕ ಸರಿಸುಮಾರು ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ. ಖುಷ್ವಂತ್ ಸಿಂಗ್, ಚಲಂ, ಪ್ರೊತಿಮಾ ಬೇಡಿ, ಬ್ರಿಗೇಡಿಯರ್ ಜಾನ್.ಪಿ ದಳವಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, ವಿನೋದ್ ಮೆಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಪ್ರಶಸ್ತಿ ಕೊಟ್ಟಿದ್ದಾರೆ. ಸಣ್ಣ ಕತೆ ನನ್ನ ಅತಿ ಇಷ್ಟದ ಪ್ರಕಾರ. ಅದರಲ್ಲೂ ಪ್ರಶಸ್ತಿ, ಬಹುಮತಿಗಳು ಬಂದಿವೆ.

ಸದ್ಯಕ್ಕೆ ನಾನು “ಹಾಯ್ ಬೆಂಗಳೂರ್!” ಕನ್ನಡ ವಾರ ಪತ್ರಿಕೆಯ ಸಂಪಾದಕ. ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ. ಒಬ್ಬ ಹೆಂಡತಿ, ಮೂವರು ಮಕ್ಕಳ ತಂದೆ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್!

ರವಿ ಬೆಳಗೆರೆ

* * *

ನಾ ಹುಟ್ಟಿದ್ದು ವಡ್ರಳ್ಳಿ

mo.pngನಾ ಹುಟ್ಟಿದ್ದು ವಡ್ರಳ್ಳಿ… ಬೆಳೆದದ್ದು ಬ್ಯಾಡರಳ್ಳಿ… ಮದುವೆ ಆಗಿದ್ ಹಾರ್ನಳ್ಳಿ… ಎಂಬ ಟಿ.ಪಿ.ಕೈಲಾಸಂರವರ ಟಿಪಿಕಲ್ ಹಾಡಿನಂತೆ ನಾನು ಬೆಂಗಳೂರು, ಮಂಗಳೂರು ಹಾಗೂ ಕಲ್ಬುರ್ಗಿಯ ನಡುವಿನ ಪಥಿಕ. ಈಗ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ ಎಂಬ ಮಾಯಾನಗರಿಯಲ್ಲಿ ವಾಸ. ಈಟಿವಿ ಕನ್ನಡ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥ.

ಎಂ.ಬಿ.ಸಿಂಗ್, ಜಿ.ಎಸ್.ಸದಾಶಿವರೆಂಬ ಮಾಂತ್ರಿಕರ ಅಖಾಡಾದಲ್ಲಿ ತಾಲೀಮು. ಪ್ರಜಾವಾಣಿಯಲ್ಲಿ ೧೨ ವರ್ಷಗಳ ಕಾಲ ಪ್ರಯೋಗ. ಈ ಕಾರಣದಿಂದಾಗಿಯೇ ಕಡಲ ಕಿನಾರೆಯ ನಗರಿ ಮಂಗಳೂರಿಗೆ, ಇವ ನಮ್ಮವ ಇವ ನಮ್ಮವ ಎನ್ನುವ ಕಲ್ಬುರ್ಗಿಗೆ ಪಯಣ. ಕೊಟ್ಟಿದ್ದಕ್ಕಿಂತ ಪಡೆದ ಅನುಭವವೇ ಸಾಕಷ್ಟು.

ಮಂಗಳೂರು ಎಂಬ ನಗರಿ ಮನಸಲ್ಲಿ ಕೂರಿಸಿದ್ದ ಚಿತ್ರಸಂತೆಯಿಂದಾಗಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಜಿಗಿತ. ಪೆನ್ ಬದಲು ಕ್ಯಾಮರಾ ಮೂಲಕ ಮಾತಾಡುವ ಅವಕಾಶ. ಈಟಿವಿಯಲ್ಲಿ ಹಿರಿಯ ವರದಿಗಾರನಾಗಿ, ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ ಆಗಿ ನಂತರ ಈಗ ಮುಖ್ಯಸ್ಥ.

ಚಲನಚಿತ್ರ, ಟಿವಿ, ಜಾನಪದ ಹೀಗೆ ಸಿಕ್ಕಿದ್ದೆಲ್ಲಾ ಬರೆಯುತ್ತಾ ಕೊನೆಗೆ ಇವೆಲ್ಲಾ ಬೇಡ ಎಂದು ತೀರ್ಮಾನಿಸಿ ಮಾಧ್ಯಮ ವಿಶ್ಲೇಷಣೆ ಎಂಬ ಬಸ್ ಸ್ಟಾಂಡ್ ನಲ್ಲಿ ವಾಸ. ಈ ಕಾರಣಕ್ಕಾಗಿಯೇ ಜಗತ್ತು ಅರಿಯುವ ಅವಕಾಶ. ಕ್ಯೂಬಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ಯುವ ಪತ್ರಕರ್ತರ ಸಮಾವೇಶದಲ್ಲಿ ಭಾರತದ ಪ್ರತಿನಿಧಿ. ಈ ಪುಸ್ತಕಕ್ಕೆ ಆಧಾರ. ನಂತರ ಈಟಿವಿಯ ವತಿಯಿಂದ ಸಿಎನ್ ಎನ್ ಚಾನಲ್ ಜೊತೆಗೆ ಕೈ ಕುಲುಕಲು ಅಮೆರಿಕಾಗೆ ಪಯಣ.

ಬರೆದದ್ದು ಹಲವಷ್ಟು. ಆದರೆ ಇಷ್ಟವಾಗಿದ್ದು ಈ ಪ್ರವಾಸ ಕಥನ. ಎಕ್ಕುಂಡಿಯ ಬೆನ್ನು ಹತ್ತಿದ “ಎಕ್ಕುಂಡಿ ನಮನ”. ಮಾಧ್ಯಮದ ಬಗ್ಗೆ ಬರೆದದ್ದು ಈಗ ನ್ಯೂಸ್ ಪೇಪರ್ ಭಾಷೆಯಂತೆ ನಿನ್ನೆಯ ಇತಿಹಾಸ ಅಥವಾ ಇಂದಿಗೆ ರದ್ದಿ. ಜಾನಪದದ ಬಗ್ಗೆ ಎಡಿಟ್ ಮಾಡಿದ ಪುಸ್ತಕಕ್ಕಿಂತ ಬರೆದ ಮುನ್ನುಡಿ “ಮಡಿಲಕ್ಕಿ”ಯೇ ಇಷ್ಟ. “ಸೋನೆ ಮಳೆಯ ಸಂಜೆ” ಕವನ ಸಂಕಲನ ಪ್ರೀತಿಯ ಹೂಗುಚ್ಛವೇ ಎಂಬ ಅನುಮಾನ. ಪ್ರೀತಿ ಸೋನೆಯಲ್ಲಿ ತೊಯ್ದಿದ್ದು ಮಾತ್ರ ದಿಟ.

ಯಾಕೋ ಗೊತ್ತಿಲ್ಲ ಗಾಳಿಪಟ ಅಂದ್ರೆ ತುಂಬಾ ಇಷ್ಟ. ಗೂಡು ಕಟ್ಟಿಕೊಂಡು ಯಾರ ಕೈಗೂ ಸಿಗದೆ ಒಳಗೇ ಉಳಿಯುತ್ತಲ್ಲಾ ಹುಳ ಅದನ್ನ ಕಂಡ್ರೆ ನಂಗೂ ಹಾಗಾಗ್ಬೇಕು ಅನ್ನೋ…. ಚಿನ್ನ ಚಿನ್ನ ಆಸೈ.

ಜಿ.ಎನ್.ಮೋಹನ್

* * *

ನಾನು ಹುಟ್ಟಿದ್ದು ನನಗೆ ನೆನಪಿಲ್ಲ

sushruta.jpgಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಿ.ದೊಡ್ಡೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಸಾವಿರದೊಂಭೈನೂರ ಎಂಬತ್ತದೈನೇ ಇಸವಿ ಮೇ ತಿಂಗಳ ಹನ್ನೆರಡೇ ತಾರೀಖು ರಾತ್ರಿ ಹತ್ತು ಗಂಟೆ ಹೊತ್ತಿಗೆ ಗೌರಮ್ಮ ಮತ್ತು ಶ್ರೀಧರ ಮೂರ್ತಿ ಎಂಬ ದಂಪತಿಗಳ ಪುತ್ರನಾಗಿ ನಾನು ಹುಟ್ಟಿದ್ದು ನನಗೆ ನೆನಪಿಲ್ಲ; ಕೇಳಿ ತಿಳಿದಿದ್ದೇನೆ ಅಷ್ಟೆ. ನನಗೆ ನೆನಪಿರುವುದು ಅಂದರೆ ಅದೇ ಊರಿನಲ್ಲಿ ಗೆಳೆಯರೊಂದಿಗೆ ಅನ್ನ-ಆಸೆ, ಚಿನ್ನಿ-ದಾಂಡು, ಕಳ್ಳ-ಪೋಲೀಸ್, ಕೆರೆ-ದಡ, ಹುಲಿ-ಹಸು ಆಟಗಳನ್ನು ಆಡಿದ್ದು. ಅಪ್ಪ ನನಗಾಗಿ ಬಾಲಮಂಗಳ ತಂದುಕೊಡುವುದರೊಂದಿಗೆ ನಾನು ಪಠ್ಯೇತರ ಓದಿಗೆ ನನ್ನನ್ನು ತೊಡಗಿಸಿಕೊಂಡೆ. ಸಾಹಿತ್ಯಾಸಕ್ತನಾಗಿದ್ದ ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳ ಮೇಲೆ, ಮನೆಗೆ ಬರುತ್ತಿದ್ದ ಮ್ಯಾಗಜೀನುಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಹಾಗೇ ಸಾಹಿತ್ಯದಲ್ಲಿ ಆಸಕ್ತಿ ಕುದುರಿತು. ಈಗಂತೂ ಫುಲ್-ಟೈಮ್ ಸಾಹಿತ್ಯಾಸಕ್ತ!

ನನ್ನ ಡಿಪ್ಲೋಮಾ ಓದನ್ನು ಸೊರಬದಲ್ಲಿ ಮುಗಿಸಿ ಮುಂದೆ “ಏನೇನೋ” ಮಾಡಬೇಕು ಎಂದುಕೊಂಡು, ಕನಸಗಳನ್ನು ತುಂಬಿದ ದೊಡ್ಡ ಮೂಟೆಯೊಂದನ್ನು ಹೊತ್ತುಕೊಂಡು ಬೆಂಗಳೂರಿಗೆ “ಹಾರಿ” ಬರುವುದರೊಂದಿಗೆ ನನ್ನ ಬದುಕಿನ ಎರಡನೇ ಮಜಲು ಶುರುವಾಗಿದೆ. ನನ್ನ ಸಾಹಿತ್ಯಾಸಕ್ತಿಯನ್ನು ತಣಿಸಲೋಸುಗ ಓದಿದ, ಓದುತ್ತಿರುವ ಫಲವಾಗಿ ಈಗೀಗ ಅಷ್ಟಿಷ್ಟು ಬರೆಯುತ್ತಿದ್ದೇನೆ. ಹಿಂದೆ ಮೂರ್ನಾಲ್ಕು ಬಾರಿ ಕವಿತೆ-ಗಿವಿತೆ ಗೀಚಿ ಅದು ಆ-ಈ-ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಸುಳ್ಳೇನಲ್ಲ. ಈಗ, ನಾನು “ಈಗಿನ ಕಾಲದವ”ನಾದ್ದರಿಂದ, ಬರೆದಿದ್ದನ್ನೆಲ್ಲ ಒಂದು ಬ್ಲಾಗು ಓಪನ್ನು ಮಾಡಿ ಅದರಲ್ಲಿ ಬಸಿದಿಡುವುದನ್ನು ರೂಢಿಸಿಕೊಂಡಿದ್ದೇನೆ. ಆ ಬ್ಲಾಗಿನಲ್ಲಿ ನನ್ನ ಸವಿನೆನಪುಗಳು, ಭಾರೀ ಕನಸುಗಳು ಮತ್ತು ಇವುಗಳ ತಪನೆಯಲ್ಲೇ ಕಳೆದುಹೋಗುತ್ತಿರುವ ನನ್ನ “ಇವತ್ತು”ಗಳ ಚಿತ್ರಣ ನಿಮಗೆ ಸಿಗುತ್ತದೆ.

ಸುಶ್ರುತ ದೊಡ್ಡೇರಿ

ಮುಂದಿನ ದಿನಗಳಿಗೆ ದಾರಿ

ಜಿ ಎನ್ ಮೋಹನ್

ಟರಾಜ್ ಹುಳಿಯಾರ್ ಮತ್ತು ಅವನ ಸಾಂಸ್ಕೃತಿಕ ಬರಹಗಳ ಸಂಕಲನ “ಗಾಳಿ ಬೆಳಕು” ಬಗ್ಗೆ ಬರೆದದ್ದು ಓದಿದೆ. ನಾನು ಈ ಹಿಂದೆ “ಹೊಸತು”ವಿನಲ್ಲಿ ಬರೆದಿದ್ದ ಬರಹ ನೆನಪಾಯಿತು. “ಗಾಳಿ ಬೆಳಕು” ಕುರಿತು ನನ್ನ ನೋಟದ ಆಯ್ದ ಭಾಗಗಳನ್ನು ನಿಮಗೆ ಕಳಿಸುತ್ತಿದ್ದೇನೆ.18

*

ನಟರಾಜ್ ಬರಹ ನನ್ನನ್ನು ಕಾಡಿಸಲು ಹಲವು ಕಾರಣಗಳಿವೆ. ನಾವಿಬ್ಬರೂ ಒಟ್ಟಿಗೇ ಕವಿತೆ ಕಟ್ಟಿದವರು. ಸಾಹಿತ್ಯವನ್ನು ಮಥಿಸುತ್ತ ಒಂದಿಷ್ಟು ಕಾಲ ಓಡಾಡಿದವರು. ಹಾಗಾಗಿ, ಇವನ ಬರವಣಿಗೆಯ ಬಗ್ಗೆ ಸದಾ ಕುತೂಹಲದ ಕಣ್ಣು. ಇನ್ನುಳಿದಂತೆ ನಾವಿಬ್ಬರೂ ಒಂದೇ ಕಾಲಮಾನದಲ್ಲಿ ಪಯಣಿಸುತ್ತಿದ್ದೇವೆ. ಮಾರ್ಕ್ಸ್ ವಾದ-ಲೋಹಿಯಾ ವಾದ, ಕೆಂಪು ರೈತ ಸಂಘ-ಹಸಿರು ರೈತ ಸಂಘ, ತುರ್ತು ಪರಿಸ್ಥಿತಿ ಉಂಟುಮಾಡಿದ ಭಯದ ನಂತರದ ಕಾಲದಲ್ಲಿ, ಗುಂಡೂರಾವ್ ಸರ್ಕಾರದ ದಬ್ಬಾಳಿಕೆ ಮಧ್ಯೆ, ಪೇಪರ್ ನಂತರದ ಟಿವಿ ಕಂಪ್ಯೂಟರ್ ಮಾಧ್ಯಮಗಳು ಬಂದಿಳಿದ, ಹೆಗಡೆ ಸರ್ಕಾರ ತಣ್ಣಗೆ ಚಳವಳಿಯ ಚೈತನ್ಯ ಕಸಿದುಕೊಂಡ, ನರಗುಂದ-ನವಲಗುಂದ ರೈತರ ಹೋರಾಟ, ಕನ್ನಡದ ಗೋಕಾಕ್ ಚಳವಳಿ, ಪತ್ರಿಕೋದ್ಯಮದಲ್ಲಿ ಕ್ಯಾಸೆಟ್ ಲೋಕ ಕಂಡ ಭಿನ್ನದನಿ, ಕನ್ನಡ ಕಾವ್ಯದ ಬದಲಾದ ಮುಖಗಳು… ಇವೆಲ್ಲವನ್ನೂ ಕಂಡ ತಲೆಮಾರಿನವರು ನಾವು.

ನಾನು ಸಂವಹನದ ವಿದ್ಯಾರ್ಥಿ. ನಟರಾಜ್ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಮಾಡಿದ ಸಾಹಿತ್ಯದ ವಿದ್ಯಾರ್ಥಿ. ಹಾಗಾಗಿ ನಾವಿಬ್ಬರೂ ನಮ್ಮದೇ ದಾರಿಗಳಲ್ಲಿ ಈ ಮೇಲಿನ ಎಲ್ಲಾ ಘಟ್ಟಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಟರಾಜ್ ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳು ಹೇಗಿದೆ ಎಂಬ ಕುತೂಹಲದ ಜೊತೆಗೇ, ನಾನು ಕಂಡುಕೊಂಡ ಉತ್ತರದ ಜೊತೆಗೆ ತಾಳೆ ನೋಡುವುದೂ ಅಭ್ಯಾಸವಾಗಿದೆ. ನಟರಾಜ್ ಬರೆದ ಬರಹಗಳು ನನ್ನ ತಿಳುವಳಿಕೆಯನ್ನು ವಿಸ್ತರಿಸಿವೆ. “ಗಾಳಿ ಬೆಳಕು” ಈ ರೀತಿಯಲ್ಲೇ ಪ್ರತಿಯೊಬ್ಬರ ತಿಳುವಳಿಕೆಯನ್ನೂ ವಿಸ್ತರಿಸುವ ಒಂದು ಮಹತ್ವದ ಪ್ರಯತ್ನ.

huliyartejaswi.jpgನಟರಾಜ್ ನಮ್ಮ ಇಂದಿನ ಹಲವು ವಿಮರ್ಶಕರಿಗಿಂತ ಭಿನ್ನ. ಸಾಮಾಜಿಕ ಚಳವಳಿಯ ಅಂಗಳದಿಂದ ಈತ ಸಾಹಿತ್ಯ ಕ್ಷೇತ್ರಕ್ಕೆ ಜಿಗಿದ ಕಾರಣ ಈತನ ಬರಹ ಎಲ್ಲಾ ಸಂದರ್ಭಗಳಲ್ಲೂ ಸಮಾಜವನ್ನು ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಒಂದು ಕೃತಿ, ಒಂದು ಮಾತು, ಒಂದು ಹಾಡು, ಒಬ್ಬ ಸಾಹಿತಿ-ಎಲ್ಲರೂ ನಟರಾಜನ ಸಮಾಜ ನಿಕಷಕ್ಕೊಡ್ಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ನಟರಾಜನ ಬರಹ ಇಂದಿನ ದಿನಗಳ ವಿಮರ್ಶೆ ಮಾಡುತ್ತ, ಮುಂದಿನ ದಿನಗಳಿಗೆ ದಾರಿ ತೋರಿಸುತ್ತದೆ. ನಮ್ಮ ನಡುವಿನದನ್ನೇ ಮಾತನಾಡುತ್ತ ಸಾಹಿತ್ಯದ ಒಳದಾರಿಗಳತ್ತ ಕೈ ಹಿಡಿದು ನಡೆಸುತ್ತದೆ.

ಚಿತ್ರ: ಜಿ ಕೃಷ್ಣಪ್ರಸಾದ್

ಗುಜ್ಜಾರ್ ಎಂದ ತಕ್ಷಣ…

ಗುಜ್ಜಾರ್ ಕುರಿತ ಅವಧಿ ಬರಹ ನನಗೆ ನನ್ನ ಎಂ ಜಿ ರೋಡ್ ದಿನಗಳನ್ನು ನೆನಪಿಸಿತು. ಗುಜ್ಜಾರ್ ಎಂದ ತಕ್ಷಣ ನೆನಪಾಗುವುದೇ 17ಅವರ ಹಾಸ್ಯ. ಚಂದ್ರನಾಥ್, ಸೂರಿ, ಗುಜ್ಜಾರ್, ಮನೋಹರ್, “ಶ್ರೀ” -ಪಡೆ ಹೊಂದಿದ್ದ ಸುಧಾ ಬಳಗ ಎಷ್ಟು ಚೆನ್ನಾಗಿತ್ತು! ಇವರೆಲ್ಲರಿಗೆ ಗುರುವಾಗಿ ಇದ್ದವರು ಜಿ ಎಸ್ ಸದಾಶಿವ. ಎಲ್ಲರೂ ಗಂಭೀರ ತುಂಟರೇ. ಗುಜ್ಜಾರ್ ಒಮ್ಮೆ ಸುಧಾ ಮಕ್ಕಳ ಕತೆಗೆ ಚಿತ್ರ ಬರೆದಿದ್ದರು. ಆ ಕತೆಯಲ್ಲಿ ನಾಯಕನಿಗೆ ಬಲಗಾಲು ಇರಲಿಲ್ಲ. ಆದರೆ ಗುಜ್ಜಾರ್ ಚಿತ್ರದಲ್ಲಿ ಎಡಗಾಲು ಇರಲಿಲ್ಲ. ಓದುಗರೊಬ್ಬರು ಈ ಬಗ್ಗೆ ಪತ್ರ ಬರೆದಿದ್ದರು. ಇದನ್ನು ಗುಜ್ಜಾರ್ ಬಣ್ಣಿಸಿ ಹೇಳುತ್ತಿದ್ದ ರೀತಿ ಎಷ್ಟು ಚೆನ್ನಾಗಿರುತ್ತಿತ್ತು!

ಗುಜ್ಜಾರ್ ಕಾರ್ಟೂನ್ ಗಳಿಗಿಂತ ನನಗೆ ಅವರ ಕ್ಯಾರಿಕೇಚರ್ ಗಳು ತುಂಬಾ ಇಷ್ಟ. ಅವರ ದೇಸಿ ರಾಜಕೀಯ ಜ್ಞಾನಕ್ಕಿಂತ ಅವರ ಅಂತಾರಾಷ್ಟ್ರೀಯ ದೃಷ್ಟಿಕೋನ ಚೆನ್ನಾಗಿತ್ತು. ಅವರು ಬಹುಶಃ ನಮ್ಮ ನಡುವಿನ ಅದ್ಭುತ ರಾಜಕೀಯ ಕಾರ್ಟೂನಿಸ್ಟ್. ಈಗ ಆ ಕೊರತೆ ತುಂಬುತ್ತಿರುವುದು ಪಿ ಮೊಹಮ್ಮದ್ ಹಾಗೂ ಎಸ್ ವಿ ಪದ್ಮನಾಭ.

ಗುಜ್ಜಾರ್ ಆಗೊಮ್ಮೆ ಈಗೊಮ್ಮೆ ಫೋನ್ ಮಾಡುತ್ತಾರೆ. ಅವರ ಫೋನ್ ಬಂದಾಗ ನನಗೆ ಯಾಕೊ ಸದಾಶಿವ, ಎಮ್ ಜಿ ರೋಡ್, ಈಗಿಲ್ಲದ ಕಾಫೀ ಹೌಸ್ ನೆನಪಾಗುತ್ತದೆ. ಗುಜ್ಜಾರ್ ಚಿತ್ರಗಳನ್ನು ನಿಮ್ಮಿಂದಾಗಿ ಮತ್ತೆ ಕಂಡಾಗ ನಿಮ್ಮ ಮೂಲಕವೇ ಗುಜ್ಜಾರ್ ಗೆ ಹಲೋ ಹೇಳೋಣ ಎನ್ನಿಸಿತು.

-ಜಿ ಎನ್ ಮೋಹನ್

ಕುಮಟೆಗೆ ಬಂದಾ ಕಿಂದರಿ ಜೋಗಿ

16ಕಥನ ಕವನಗಳ ಪರಂಪರೆಗೆ ಹೊಸದೊಂದು ದಿಕ್ಕು ಕಾಣಿಸಿದ ಮತ್ತು ಸಮಾಜವಾದಿ ಚೈತನ್ಯವನ್ನು ಕಾವ್ಯದ ಅಂಗಳದಲ್ಲಿ ಹೊಳೆಯಿಸಿದ ಕವಿ ಸು ರಂ ಎಕ್ಕುಂಡಿಯವರು. ಬಾನಿಗೇ ಗೆರೆ ಬರೆವ ಬೆಳ್ಳಕ್ಕಿಗಳ ಸಾಲಿನಲ್ಲಿ ಅವರು ಮತ್ತಾವುದೋ ಲೋಕದ ಬಾಗಿಲು ಕಂಡವರು. ಅವರ ಕಾವ್ಯ ಅಂಥ ಉಲ್ಲಸಿತ ಮತ್ತು ಅವಿಶ್ರಾಂತ ಪಥದ ಬೆಳಕಿಗೆ ಆಶಿಸಿದ್ದಾಗಿದೆ. ಅವರ ಕಾವ್ಯ, ನೋವಿನ ತೀವ್ರತೆಯಿಂದಾಗಿ ದೃಢಗೊಂಡ ಚೈತನ್ಯವುಳ್ಳದ್ದು. ಅದರಿಂದಾಗಿಯೇ, ಮೈಯಿರದ ದನಿಗಳು ಕೂಡ ಅಮ್ಮ ಕೊಟ್ಟ ಬೀಜವನ್ನು ಬಿತ್ತುವ ಹಂಬಲವನ್ನು ಅಲ್ಲಿ ವ್ಯಕ್ತಪಡಿಸುತ್ತವೆ.

ಉತ್ತರ ಕನ್ನಡದ ಬಂಕಿಕೊಡ್ಲದಲ್ಲಿ ಬೆಳಗಿದ ಎಕ್ಕುಂಡಿಯವರ ಕಾವ್ಯಾಶ್ರಮದಲ್ಲಿ ಮಳೆಗಂಧವಿದೆ. ವೈರುದ್ಧ್ಯಗಳನ್ನು ಸೋಜಿಗವೆಂಬಂತೆ ಪರಸ್ಪರ ಸೇರಿಸಿ ಸಂವಾದಕ್ಕೆ ಅನುವಾಗಿಸಬಲ್ಲ ಹಿರಿತನವಿದೆ. ಕಡಲ ಬೇಲೆಯಂಥ ಹೆಜ್ಜೆ ಸಾಕ್ಷಿಗಳನ್ನು ಉಳಿಸಿಕೊಳ್ಳುವ ನೆಲೆಯಿದೆ. ಉಪ್ಪಿನಾಗರದಲ್ಲಿನ ಬಾಣಲೆಯ ಬೆಂಕಿಗಳನ್ನೂ ಒಂದು ಗಳಿಗೆ ಆರಿಸಬಲ್ಲ ಶಕ್ತಿಯಿರುವ ಬಕುಲದ ಹೂಗಳಿವೆ. ಶ್ರಮಿಕ ಬದುಕಿನ ಕಥನಗಳನ್ನು ಎಕ್ಕುಂಡಿಯವರು ಕಂಡಿರಿಸಿದ ಪರಿಯೇ, ರಮ್ಯದ ಗರಿಗಳನ್ನು ಕಟ್ಟಿಕೊಂಡೂ ಅದರಾಚೆಯ ಸತ್ಯವನ್ನು ಗಳಿಸುವಂಥ ಹಾದಿಯದ್ದು.

ಕಾವ್ಯವನ್ನು ಗಾಢವಾಗಿ ಬದುಕಿದ ಎಕ್ಕುಂಡಿಯವರು, ಕುಮಟೆಯ ಕಿನಾರೆಯಲ್ಲಿನ ಬಂಕಿಕೊಡ್ಲದಲ್ಲಿ ಅನುಭವದ ದಾರಿ ನಡೆದರು. ಹಾಲಕ್ಕಿಗಳ ಗುಮಟೆಯ ನಾದಕ್ಕೆ ಕಿವಿಗೊಟ್ಟರು. ಅವರ ಹಾಡೊಳಗಿನ ನೋವಿಗೆ ಅಕ್ಷರಗಳಲ್ಲಿ ಜಾಗ ಹುಡುಕಿದರು. ಎಲ್ಲರಿಗೂ ಬೇಕಾದ ಎಕ್ಕುಂಡಿ ಮಾಸ್ತರರಾದರು. ಎಲ್ಲರನ್ನೂ ಹಾಡೊಳಗೆ ಕರೆವ ಕಿಂದರಿ ಜೋಗಿಯಾದರು.

ಎಕ್ಕುಂಡಿ ಕಾವ್ಯದ ಗಂಭೀರ ಅಧ್ಯಯನಾಕಾಂಕ್ಷಿಗಳಿಗೆ ಅರ್ಥಪೂರ್ಣ ಪ್ರವೇಶಿಕೆಯಾಗಬಲ್ಲ ಒಂದು ಕೃತಿ, ಕವಿ, ಪತ್ರಕರ್ತ ಜಿ ಎನ್ ಮೋಹನ್ ಸಂಪಾದಿಸಿರುವ “ಎಕ್ಕುಂಡಿ ನಮನ”. ಈ ಪುಸ್ತಕಕ್ಕೆ ಮೋಹನ್ ಅವರು ಬರೆದ ಮುನ್ನುಡಿ “ಬಂಡೆ ಮತ್ತು ಚಿಟ್ಟೆ” ಇಲ್ಲಿ ಕೊಟ್ಟಿದ್ದೇವೆ. ಎಕ್ಕುಂಡಿಯವರ ಕಾವ್ಯ ಕುರಿತ ಹೆಚ್ಚಿನ ಓದಿಗಾಗಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ “ಸಾಲುದೀಪಗಳು” ಕೃತಿಯಲ್ಲಿನ, ಮೋಹನ್ ಅವರೇ ಬರೆದ ಮತ್ತೊಂದು ಲೇಖನವನ್ನೂ ಓದಬಹುದು. ಅಲ್ಲದೆ, ಸಾಹಿತ್ಯ ಅಕಾಡೆಮಿ ಎಕ್ಕುಂಡಿ ಕುರಿತ ವಿಚಾರ ಸಂಕಿರಣ ಏರ್ಪಡಿಸಿ ಪ್ರಕಟಿಸಿದ ಪುಸ್ತಕವನ್ನೂ ಗಮನಿಸಬಹುದು.

ಇವತ್ತಿಗೂ ಎಕ್ಕುಂಡಿಯವರ ಕಾವ್ಯ ತೆರೆದು ತೋರುವ ಸಾಧ್ಯತೆಗಳು ಹಲವಾರು ಎಂಬ ಕಾರಣಕ್ಕಾಗಿ ಇದಿಷ್ಟು.

ಬಂಡೆ ಮತ್ತು ಚಿಟ್ಟೆ

ಜಿ ಎನ್ ಮೋಹನ್

ಅದೇ ಉರಿಬಿಸಿಲು, ಕೆಂಪುಹುಡಿ, ಅದೇ ಮರದ ನೆರಳು, ಬೀಸಿ ಬರುವ ಅದೇ ತೆಂಕಣಗಾಳಿ, ಮಾವಿನೆಳೆ ಚಿಗುರಿನಲ್ಲಿ ಚಿಮ್ಮುವ ಅದೇ ಹಾಡು. ಕವಚವ ತೊಟ್ಟು ಖಡ್ಗವನ್ನು ಟೊಂಕದಲ್ಲಿ ಬಿಗಿದಿಟ್ಟು ಕುದುರೆಗೆ ಥಡಿ ಹಾಕಿ ಮತ್ತೆ ಪಯಣಕ್ಕೆ ಸಿದ್ಧನಾದ ಆತನನ್ನು ಹೆಂಗಸು ಕೇಳುವ ಅದೇ ಪ್ರಶ್ನೆ-ekkundi3.jpg

ಮರೆತು ಬಿಟ್ಟೆನು ನಿಮ್ಮ ಹೆಸರು ಕೇಳಲು. ನೀವು
ನಡೆದ ದಾರಿಗೆ ಇರಲಿ ಶುಭದ ನೆರಳು
ಬಿರಿದ ಮಲ್ಲಿಗೆ ಕಂಡು, ಕೋಗಿಲೆಯ ದನಿ ಕೇಳಿ
ತುಂಬಿ ಬಂದಿತ್ತೇಕೆ ಕಣ್ಣು, ಕೊರಳು?

ಉತ್ತರ ಪಂಪ ಎಂದಾದರೂ ಆಗಬಹುದು. ಇಲ್ಲ ಎಕ್ಕುಂಡಿ ಎಂದಿದ್ದರೂ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ. ಎದೆಯಲ್ಲಿ ಕಾವ್ಯ ಕೈಯಲ್ಲಿ ಖಡ್ಗ ಹಿಡಿದ ಪಂಪನ ಹಾಗೆಯೇ ಎಕ್ಕುಂಡಿ ಕೂಡಾ. ಅದಕ್ಕೇ ಅವರು ಹೇಳಿದ್ದು- “ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡಾ…”

ಕವಿ ಮತ್ತು ಕಲಿ ಎರಡರ ಬೆಸುಗೆಯಾದ ಪಂಪನಿಗೆ ಇಡೀ ವಿಶ್ವದಲ್ಲಿ ಅನೇಕ ಬಂಧುಗಳಿದ್ದಾರೆ. ದಕ್ಷಿಣ ಆಫ಼್ರಿಕಾದಲ್ಲಿ ಬೋಥಾರವರ ವರ್ಣದ್ವೇಷಿ ಸರ್ಕಾರ ಕಪ್ಪು ಜನರ ಪರವಾಗಿ ಹೋರಾಟ ನಡೆಸಿದ ಕವಿ ಬೆಂಜಮಿನ್ ಮೊಲಾಯಿಸ್ ಅವರನ್ನು ಗಲ್ಲಿಗೆ ಹಾಕಿದಾಗ ನನಗೆ ನೆನಪಾದದ್ದು ಎಕ್ಕುಂಡಿಯವರ ಈ “ಯೋಧ ಮತ್ತು ಹೆಂಗಸು”. ಬೆಂಜಮಿನ್ ಮೊಲಾಯಿಸ್ ಸತ್ತಾಗ ಪಂಪನ ಸೈನ್ಯದಲ್ಲಿ ಒಬ್ಬರು ಕಡಿಮೆಯಾದರಲ್ಲಾ ಎನಿಸಿತ್ತು. ಪಂಪ ಬಿಕ್ಕುತ್ತಾನೆ ಎಂದು ಎನಿಸಿತ್ತು. ಎಕ್ಕುಂಡಿಯವರು ನಿಧನರಾಗಿದ್ದಾರೆ. ಪಂಪ ಈಗ ಮತ್ತೊಮ್ಮೆ ಬಿಕ್ಕುತ್ತಿದ್ದಾನೆ.

ತಾಯಿ ಅಕಸ್ಮಾತ್ ಹಾಡಿದ ಒಂದು ಹಾಡಿನಿಂದ ಇಡೀ ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡ ಎಕ್ಕುಂಡಿ, ಕಡಲ ತೀರದ ದಂಡೆಗಳಲ್ಲಿ ಬೆಂಕಿ ಹಾಕಿ ಗುಮಟೆ ಹಿಡಿದು ಗಂಟೆಗಟ್ಟಲೆ ಕುಣಿಯುತ್ತಾ ಎದೆಯಿಂದ ಹಾಡುಗಳ ಹೊಳೆ ಹರಿಸುತ್ತಿದ್ದ ಹಾಲಕ್ಕಿ ಒಕ್ಕಲಿಗರ ಬದುಕಿನಿಂದಲೂ ರೆಕ್ಕೆಗಳನ್ನು ಪಡೆದರು. ಬದುಕಿನ ಬಹುಭಾಗ ಕೆಂಡದ ಮೇಲೆ ಕಾಲಿಟ್ಟು ನಡೆದ ಸುಬ್ಬಣ್ಣ ರಂಗನಾಥ ಎಕ್ಕುಂಡಿ ತಾವು ನಡೆದು ಬಂದ ಹಾದಿಗೆ ಕಾವ್ಯದ ಗರಿ ತೊಡಿಸಿದರು. ಕಾವ್ಯ ಹೇಗಿರಬೇಕು? ಎಂಬ ಪ್ರಶ್ನೆಗೆ ಎಕ್ಕುಂಡಿಯವರ ಬಳಿ ಸ್ಪಷ್ಟ ಉತ್ತರವಿತ್ತು- ಕವಿಯ ಹಾಗೆ, ಕಲಿಯ ಹಾಗೆ. Continue reading ಬಂಡೆ ಮತ್ತು ಚಿಟ್ಟೆ

ಇದು ಪುಟ್ಟ ಹಣತೆಯ ರೂಪಕ

15ಮೂಲತಃ ಕವಿಯಾಗಿರುವ ಪತ್ರಕರ್ತ ಜಿ ಎನ್ ಮೋಹನ್ ಅವರ ಕ್ಯೂಬಾ ಪ್ರವಾಸ ಕಥನ, ನನ್ನೊಳಗಿನ ಹಾಡು ಕ್ಯೂಬಾ. ಅಮೆರಿಕಾಕ್ಕೆ ಸೆಡ್ದು ಹೊಡೆದು ನಿಂತಿರುವ ಸ್ವಾಭಿಮಾನಿ ಚೈತನ್ಯದ ದೇಶ ಕ್ಯೂಬಾ ಬಗೆಗಿನ ಅವರ ತನ್ಮಯೀ ಧ್ಯಾನ, ಅಂತಃಕರಣದ ಪ್ರೀತಿಯೇ ಕಥನವಾಗಿ ಅವತರಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಕನ್ನಡ ಸ್ನಾತಕೋತ್ತರ ಪದವಿಗೆ ಪಠ್ಯ, ತಮಿಳು, ತೆಲುಗು ಹಾಗೂ ಹಿಂದಿಗೆ ಅನುವಾದ ಇವು ಈ ಪುಸ್ತಕಕ್ಕೆ ಸಂದ ಗೌರವಗಳು. ಕತ್ತಲೆಯಲ್ಲಿ ಲೋಕ ಅಳುತ್ತಿರುವಾಗ, ಅಭಯ ನೀದುವ ಪುಟ್ಟ ಹಣತೆ ಎಂದು ಮೋಹನ್ ಅವರು ಕ್ಯೂಬಾವನ್ನು ಈ ಪ್ರವಾಸ ಕಥನದ ಕೊನೆಯಲ್ಲಿ ಬಣ್ಣಿಸುತ್ತಾರೆ. ಆ ಪುಟ್ಟ ಹಣತೆಯ ಕಥೆ ಈಗ ಆನ್ ಲೈನ್ ಪುಟಗಳಲ್ಲಿ ಲಭ್ಯ. ಇದನ್ನು ಅವಧಿ ಮೂಲಕ ಕೊಡಲು ಅವಕಾಶ ಮಾಡಿಕೊಟ್ಟ ಮೋಹನ್ ಅವರಿಗೆ ವಂದನೆಗಳು. ಇಲ್ಲಿ ಬಲಬದಿಯಿರುವ ಲಿಂಕ್ಸ್ ಅಡಿಯಲ್ಲಿ ನನ್ನೊಳಗಿನ ಹಾಡು ಕ್ಯೂಬಾ ಕ್ಲಿಕ್ಕಿಸಿದರೆ ತೆರೆದುಕೊಳ್ಳುತ್ತದೆ ಕ್ಯೂಬಾ.

ಕನಸುಗಳ ಮಧ್ಯೆಯೇ ನಿಟ್ಟುಸಿರು ಹೆಣೆದವಗೆ

ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರ ಎರಡನೇ ಕವನ ಸಂಕಲನ ಅಚ್ಚಿನಲ್ಲಿದೆ. ಮೊದಲ ಸಂಕಲನ ಸೋನೆ ಮಳೆಯ ಸಂಜೆ ಪ್ರಕಟವಾದ ೧೫ ವರ್ಶಗಳ ಬಳಿಕ ಪ್ರಕಟವಾಗುತ್ತಿರುವ ಈ ಸಂಕಲನದ ಹೆಸರು ಪ್ರಶ್ನೆಗಳಿರುವುದು ಶೇಕ್ ಸ್ಪಿಯರನಿಗೆ. ಹೆಸರಲ್ಲೇ ಸುಳಿವು ಸಿಗುವ ಹಾಗೆ, ಇಲ್ಲಿನ ಬಹುಪಾಲು ಕವಿತೆಗಳ ಅಂತರಂಗದಲ್ಲಿರುವುದು ರಂಗಪ್ರತಿಮೆಗಳು. ಕವಿ, ಶೇಕ್ಸ್ ಪಿಯರನನ್ನು ಕಾಣುವುದು ಕನಸುಗಳ ಮಧ್ಯೆಯೇ ನಿಟ್ಟುಸಿರು ಹೆಣೆದವನು ಎಂದು. ಗ್ರಹಿಕೆಯ ಇಂಥ ಅಪರೂಪ ತಿರುವಿನಲ್ಲೇ ಈ ಕವಿತೆಗಳ ಭಾವಪ್ರಾಣವಿದೆ. ಬರಲಿರುವ ಈ ಸಂಕಲನದ ಅದೇ ಹೆಸರಿನ ಕವಿತೆ, ಅವಧಿ ಬಳಗದ ಓದಿಗೆ.

05ಪ್ರಶ್ನೆ ಇರುವುದು ಶೇಕ್ಸ್ ಪಿಯರನಿಗೆ
– ಜಿ ಎನ್ ಮೋಹನ್

ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ ನೇರ ಶೇಕ್ಸ್ ಪಿಯರನಿಗೇ
ಏಕೆ ಹಾಗಾಯಿತು ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ  ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ ಮ್ಯಾಕ್ ಬೆತ್ ನಿಗೆ ಏಕೆ ಮುಖಾಮುಖಿಯಾಗಿಸಿದೆ ಆ ಮೂರು ಜಕ್ಕಿಣಿಯರನ್ನು ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು ಆಕಾಂಕ್ಷೆಗಳ ನೀರೆರೆದ ಆ ಲೇಡಿ ಮ್ಯಾಕ್ ಬೆತ್ ಳನ್ನು ಒಥೆಲೋ ಡೆಸ್ಡಮೋನಾಳ ಮಧ್ಯೆ ಬೇಕಿತ್ತೇ ಆ ಕರವಸ್ತ್ರ
ಸಂಶಯದ ಸುಳಿ ಬಿತ್ತಬೇಕಿತ್ತು
ಎಂಬುದೇ ನಿನ್ನ ಆಸೆಯಾಗಿದ್ದಿದ್ದರೆ
ನೇರ ಎರಡು ಸ್ವಗತದಲ್ಲೋ ಇಲ್ಲಾ
ಮೂರು ಅಂಕದಲ್ಲೋ ಇಬ್ಬರನ್ನೂ
ಎದುರು ಬದುರಾಗಿಸಿ ಮಾತಿಗೆ
ಮಾತು ಹೆಣೆದು ಸಲೀಸಾಗಿ
ಸೋಡಾ ಚೀಟಿ ಕೊಡಿಸಿಬಿಡಬಹುದಿತ್ತಲ್ಲ
ಏಕೆ ಬೇಕಿತ್ತು ಸಂಶಯಗಳನ್ನು
ಬಿತ್ತುವ ಹಗಲಿರುಳೂ ನಿದ್ದೆ
ಇಲ್ಲದಂತೆ ಮಾಡುವ ಕೊನೆಗೆ
ಅವರೂ, ನೀನೂ ಜೊತೆಗೆ ನಾವೂ
ಹೊರಳಾಡುವಂತೆ ಮಾಡುವ
ಆ ಕರವಸ್ತ್ರದ ಕಥೆ

ಪ್ರಶ್ನೆ ಇರುವುದು ಶೇಕ್ಸ್ ಪಿಯರ್ ನಿಗೆ
ಇರಲೇ ಇಲ್ಲದೇ ಇರಲೆ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು ಒಂದು
ಸಾಮಾನ್ಯ ಗೂಗೆಯಿಂದ ಹೊಡೆದು
ಕೊಂದವನಿಗೆ ಬರ್ನಂ ವನಕ್ಕೂ
ಕೈಕಾಲು ಬರಿಸಿದವನಿಗೆ ಊಟದ
ಬಟ್ಟಲುಗಳ ನಡುವೆ ಎದ್ದು ನಿಲ್ಲುವ
ಪ್ರೇತಗಳನ್ನು ಸ್ರ್‍ಅಷ್ಟಿಸಿದವನಿಗೆ ಕಪ್ಪಿಗೂ
ಬಿಳುಪಿಗೂ ನಡುವೆ ಒಂದು ಗೋಡೆ
ಎಬ್ಬಿಸಿದವನಿಗೆ ಸುಂದರ ಕನಸುಗಳ
ಮಧ್ಯೆಯೂ ಒಂದೊಂದು ನಿಟ್ಟುಸಿರು
ಹೆಣೆದವನಿಗೆ

ಜಾಲಿಗರಿಗೆ ನಮಸ್ಕಾರ…

ಬದಲಾಗುತ್ತಿದೆ ಅಂತರ್ಜಾಲ ಲೋಕ….
ಸತೀಶ್ ಚಪ್ಪರಿಕೆ 


ನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಡೇ ಇಂಡಿಯನ್ ಹೊರತಂದಿರುವ ವಿಶೇಷ ಸಂಚಿಕೆಯಲ್ಲಿ ಅದರ ಸಂಪಾದಕ ಸತೀಶ್ ಚಪ್ಪರಿಕೆ ಅಂತರ್ಜಾಲದಲ್ಲಿ ನಡೆಯುತ್ತಿರುವ ಕನ್ನಡ ಸಾಹಸದ ಬಗ್ಗೆ ಕಣ್ಣೋಟ ಹರಿಸಿದ್ದಾರೆ. ಅಂತರ್ಜಾಲವೇ ದ್ವಿಮುಖವಾದ ಮಾಧ್ಯಮ ಎಂದಿದ್ದರೆ. ಅದರ ಆಯ್ದ ಭಾಗ ಇಲ್ಲಿದೆ. ಸಂಪೂರ್ಣ ಓದಿಗಾಗಿ ಇಲ್ಲಿಗೆ ಭೇಟಿ ಕೊಡಿ..

03

ಅಂತರ್ಜಾಲ ಲೋಕ ಸದಾ ದ್ವಿಮುಖ. ಕೆಲವೊಂದು ತಾಂತ್ರಿಕ ಅಡೆ-ತಡೆಗಳನ್ನು ಹಾಕಿದರೂ, ಸಾರ್ವಜನಿಕವಾದ ಒಂದು ಅಂತರ್ಜಾಲ ತಾಣದಲ್ಲಿ ಓದುಗರು-ನೋಡುಗರು ಮುಕ್ತವಾಗಿ ಅಭಿಪ್ರಾಯ ಮಂಡಿಸಬಹುದು. ಇದರಿಂದ ಪ್ರಭಾವಿತಗೊಂಡಿರುವ ಕನ್ನಡ ಸಾಹಿತ್ಯ ಲೋಕದ ಹಲವಾರು ಪ್ರತಿಭೆಗಳು ಈಗಾಗಲೇ ಅವರದ್ದೇ ಅಂತರ್ಜಾಲ ತಾಣಗಳನ್ನು ಮತ್ತು ಬ್ಲಾಗ್‌ಗಳನ್ನು ಕನಸಿನ ಲೋಕದಲ್ಲಿ ನಿರ್ಮಿಸಿಯಾಗಿದೆ.
ಉದಾಹರಣೆಗೆ ದಟ್ಸ್ ಕನ್ನಡ ಡಾಟ್ ಕಾಂ, ಕನ್ನಡ ಸಾಹಿತ್ಯ ಡಾಟ್ ಕಾಂ… ಮುಂತಾದ ಅಂತರ್ಜಾಲ ತಾಣಗಳು ಈಗ ಜಗತ್ತಿನಾದ್ಯಂತ ಕನ್ನಡಿಗರು ಇರುವಲ್ಲೆಲ್ಲ ಚಿರಪರಿಚಿತ. ಇನ್ನು ಒಎಲ್‌ಎನ್‌ಸ್ವಾಮಿ, ಅವಧಿ , ಮೈಸೂರು ಪೋಸ್ಟ್, ಜೋಗಿಮನೆ…ಯಂತಹ ಬ್ಲಾಗ್‌ಗಳು ಅವುಗಳದ್ದೇ ಆದ ವಲಯದಲ್ಲಿ ವ್ಯಕ್ತಿಗತವಾಗಿ ಜನಪ್ರಿಯಗೊಳ್ಳುತ್ತಿವೆ. ಈ ನಡುವೆ ಕನ್ನಡದ ಬಹುತೇಕ ಪತ್ರಿಕೆಗಳು, ನಿಯತಕಾಲಿಕಗಳು ಅವುಗಳದ್ದೇ ಆದ ಅಂತರ್ಜಾಲ ತಾಣಗಳನ್ನು ಹೊಂದಿವೆ. ಈ ಎಲ್ಲ ಉದಾಹರಣೆಗಳ ಓದುಗ-ನೋಡುಗನಿಗೆ ಇರುವ ಒಂದು ಅತ್ಯುತ್ತಮ ಅವಕಾಶವೆಂದರೆ ಆತ ಕೂಡ ಮುಕ್ತವಾಗಿ ಅವನ ಅಭಿಪ್ರಾಯಗಳನ್ನೂ ಈ ತಾಣಗಳಲ್ಲಿ ಮಂಡಿಸಬಹುದು.

ಒಂದು ಅಂತರ್ಜಾಲ ತಾಣ ಅಥವಾ ಒಂದಷ್ಟು ಬ್ಲಾಗ್‌ಗಳನ್ನು ಮಾಡಿದ ಕೂಡಲೇ ಕನ್ನಡ ಭಾಷೆ ಇದ್ದಕ್ಕಿದ್ದಂತೆ ಉದ್ಧಾರವೇನೂ ಆಗುವುದಿಲ್ಲ. ಆದರೆ, ಜಾಗತಿಕ ಭಾಷೆಯಾಗಿ ಮೆರೆಯಬೇಕು ಎಂದು ಹೊರಟಿರುವ ಇಂಗ್ಲಿಷ್ ಓಟಕ್ಕೆ ಈ ಮೂಲಕ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದಂತಾಗುತ್ತದೆ. ಅದರೊಂದಿಗೆಯೇ ಜಾಗತಿಕ ನೆಲೆಯಲ್ಲಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಕೂಡ ಕನ್ನಡಕ್ಕೆ ಸಾಧ್ಯವಾಗುತ್ತದೆ. ಜಗತ್ತಿನ ಮೂಲೆ-ಮೂಲೆಯಲ್ಲಿ ಕೂತಿರುವ ಕನ್ನಡದ ಮನಸ್ಸುಗಳನ್ನು ಒಂದು ಮಾಡಲು ಕೂಡ ಆ ಮೂಲಕ ಸಾಧ್ಯವಾಗುತ್ತದೆ. ಇದು ಯಾವುದೇ ಭಾಷೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ವಿಷಯ.

ಮಾಹಿತಿ ತಂತ್ರಜ್ಞಾನ ಮತ್ತು ಅಂತರ್ಜಾಲ ಲೋಕದ ಮತ್ತೊಂದು ಸೊಬಗೆಂದರೆ ಅದಕ್ಕಿರುವ ಕೊಡು ಕೊಳ್ಳುವಿಕೆಯ ಗುಣ. ಒಂದು ದೇಶ, ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಇರುವ ವಿಶೇಷವಾದ ಶಕ್ತಿ. ಉದಾಹರಣೆಗೆ ಇಂಗ್ಲಿಷ್ ಮತ್ತು ಕನ್ನಡವನ್ನೇ ತೆಗೆದುಕೊಳ್ಳೋಣ. ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದಲ್ಲಿ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಕ್ರೀಡೆ ಮುಂತಾದ ಸಾಹಿತ್ಯ ಪ್ರಕಾರ ಇದುವರೆಗೆ ಪ್ರಬುದ್ಧವಾಗಿಲ್ಲ. ಏಕೆಂದರೆ ಅಂತರ್ಜಾಲ ಅದರ ವ್ಯಾಪ್ತಿ ಹಿಗ್ಗುವವರೆಗೆ ಅಂತಹ ಸಾಹಿತ್ಯ ಪ್ರಕಾರಗಳ ರಚನೆಗೆ ಅಗತ್ಯವಾದ ಮೂಲದ್ರವ್ಯವೇ ಲೇಖಕರಿಗೆ ಲಭ್ಯವಾಗುತ್ತಿರಲಿಲ್ಲ. ಆದರೀಗ ಕನ್ನಡದಲ್ಲಿಯೂ ಕೆಲವು ಅತ್ಯುತ್ತಮ ವಿಜ್ಞಾನ, ವೈದ್ಯ ವಿಜ್ಞಾನ ಹಾಗೂ ಕ್ರೀಡಾ ಲೇಖನಗಳು ಪ್ರಕಟವಾಗಲಾರಂಭಿಸಿವೆ. ಅದಕ್ಕೆ ಮೂಲ ಕಾರಣ ಅಂತರ್ಜಾಲದಲ್ಲಿರುವ ಮಾಹಿತಿ ಸಾಗರ.

ಒಂದು ಕಾಲದಲ್ಲಿ ಯಾವುದಾದರೂ ಲೇಖಕ ಏಡ್ಸ್ ಬಗ್ಗೆ ಒಂದು ಲೇಖನ ಬರೆಯಬೇಕಿದ್ದರೆ ಅದಕ್ಕೆ ಅಗತ್ಯವಾದ ಮಾಹಿತಿ ಸಂಗ್ರಹಿಸಲು ವಾರಗಟ್ಟಲೇ ಅಲ್ಲಿಂದ ಇಲ್ಲಿಗೆ ಓಡಬೇಕಾಗುತ್ತಿತ್ತು. ಆದರೀಗ ‘ಗೂಗಲ್’ ಅನ್ವೇಷಣಾ ಕಿಂಡಿಯಲ್ಲಿ ‘ಏಡ್ಸ್’ ಎಂದು ಟೈಪ್ ಮಾಡಿ ಹುಡುಕು ಎಂದು ಆದೇಶ ನೀಡಿದ 0.13 ಸೆಕೆಂಡುಗಳಲ್ಲಿ 3,53,00,000 ಕೊಂಡಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಆ ಪೈಕಿ ಹೆಚ್ಚಿನವು ಅಧಿಕೃತ ಮಾಹಿತಿಯಾಗಿರುವುದರಿಂದ ಮೂಲದ್ರವ್ಯವನ್ನು ಸುಲಭವಾಗಿ ಬಳಸಿಕೊಂಡು ಪರಿಣಾಮಕಾರಿಯಾದ ಲೇಖನ ಬರೆಯಬಹುದು. ಪತ್ರಿಕೋದ್ಯಮದ ಭಾಷೆಯಲ್ಲಿಯೇ ಹೇಳುವುದಾದರೆ, ಈಗ ‘ಗೂಗಲ್ ಜರ್ನಲಿಸಂ’ ಎಂಬ ಹೊಸ ಪ್ರಾಕಾರವೇ ಹುಟ್ಟಿಕೊಂಡಾಗಿದೆ. ಸಂಶೋಧನಾ ವಿದ್ಯಾರ್ಥಿಗಳ ಪಾಲಿಗೆ ಅಂತರ್ಜಾಲ ಮಾಹಿತಿಯ ಕಣಜವೇ ಸರಿ.

ಇಂತಹ ಅಸಾಧ್ಯ ಸಾಧ್ಯತೆಗಳ ನಡುವೆಯೇ ಮಾಹಿತಿ ತಂತ್ರಜ್ಞಾನ ಇ-ಪುಸ್ತಕದಂತಹ ವಿನೂತನ ಪ್ರಯೋಗಗಳಿಗೆ ಕೂಡ ಅವಕಾಶ ಮಾಡಿಕೊಟ್ಟಿದೆ.

ಇ-ಪುಸ್ತಕದ ಪರಿಕಲ್ಪನೆಯನ್ನು ಮೊದಲು ಸಾಕಾರಗೊಳಿಸಿದಾತ ಸ್ಟೀಫನ್ ಕಿಂಗ್ ಎಂಬ ಇಂಗ್ಲಿಷ್ ಲೇಖಕ. ಆತ ‘ರೈಡಿಂಗ್ ಬುಲ್ಲೆಟ್’ ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ನೇರವಾಗಿ ಇ-ಪುಸ್ತಕದ ರೂಪದಲ್ಲಿ ಪ್ರಕಟಿಸಿದ. ಕೇವಲ 48 ಗಂಟೆಗಳ ಅವಧಿಯಲ್ಲಿ ‘ರೈಡಿಂಗ್ ಬುಲ್ಲೆಟ್’ನ 5 ಲಕ್ಷ ಪ್ರತಿಗಳು ಅಂತರ್ಜಾಲದಲ್ಲಿ ಬಿಕರಿಯಾದವು. ತಲಾ ಒಂದು ಪ್ರತಿಗೆ ಕೇವಲ 2.5 ಡಾಲರ್ ಬೆಲೆ ವಿಧಿಸಿದ ಸ್ಟೀಫನ್ ಕಿಂಗ್ ಪುಸ್ತಕ ಪ್ರಕಟಣಾ ಲೋಕದಲ್ಲಿ ಹೊಸದೊಂದು ದಾಖಲೆಯನ್ನೇ ನಿರ್ಮಿಸಿದರು. ಈಗ ಇಂಗ್ಲಿಷ್‌ನಲ್ಲಿ ಕೇವಲ ಇ-ಪುಸ್ತಕವಲ್ಲ, ಮಾತನಾಡುವ ಪುಸ್ತಕಗಳು, ಸಿ.ಡಿ.ರೂಪದ ಕೃತಿಗಳು ಮಾರುಕಟ್ಟೆಯನ್ನು ಆಕ್ರಮಿಸಿಯಾಗಿದೆ.

ಕನ್ನಡದ ಬರಹಗಾರರ ಪೈಕಿ ಅಂತಹ ಒಂದು ವಿನೂತನ ಪ್ರಯೋಗ ಮಾಡಿದ ಕೀರ್ತಿ ವಸುಧೇಂದ್ರ ಅವರಿಗೆ ಸಲ್ಲಬೇಕು. ಅವರ ‘ಯುಗಾದಿ’, ‘ಮಿಥುನ’ ಮತ್ತು ‘ಕೋತಿಗಳು…’ ಕಥಾ ಸಂಕಲನಗಳು ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದವು. ನಂತರ ಆ 3 ಪುಸ್ತಕಗಳು ಸಿ.ಡಿ. ಮೂಲಕ ಪ್ರಕಟವಾದವು. ಮಾತ್ರವಲ್ಲ ಅವುಗಳು ಈಗ ಅಮೆರಿಕದಲ್ಲೂ ಲಭ್ಯವಿವೆ.

ಇತ್ತೀಚೆಗೆ ಕನ್ನಡದ ಲೇಖಕ ಜಿ.ಎನ್.ಮೋಹನ್ ಅವರ ಕವನ ಸಂಕಲನ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಪ್ರಕಟವಾಗಿದೆ. ಆ ಕವನ ಸಂಕಲನದಲ್ಲಿರುವ ಕವನಗಳನ್ನು ಬೇರೆ, ಬೇರೆ ಹಿರಿ-ಕಿರಿಯ ಸಾಹಿತಿಗಳು ವಾಚಿಸಿದ್ದಾರೆ. ಆ ಪುಸ್ತಕವೀಗ ಒಂದರ್ಥದಲ್ಲಿ ಮಾತನಾಡುವ ಪುಸ್ತಕವೇ ಆಗಿ ಬಿಟ್ಟಿದೆ. ಹೀಗೆ ವೈಯಕ್ತಿಕ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಮತ್ತು ತಂತ್ರಜ್ಞಾನ ಲೋಕದಲ್ಲಿ ಗಟ್ಟಿಯಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ, ನಮಗಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ‘ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ’ದ ಸ್ಥಾಪನೆಯಾಗ ಬೇಕಾಗಿರುವುದು ಅತ್ಯಗತ್ಯ. ಅಂತಹ ಪ್ರಯತ್ನ ಇದುವರೆಗೆ ಇಂಗ್ಲಿಷನ್ನು ಒಳಗೊಂಡು ಯಾವುದೇ ಭಾಷೆಯಲ್ಲಿ ನಡೆದಿಲ್ಲ. ಪಂಪನಿಂದ ಹಿಡಿದು ಪೂರ್ಣಚಂದ್ರ ತೇಜಸ್ವಿಯವರೆಗೆ ಪ್ರತಿಯೊಬ್ಬ ಕನ್ನಡ ಸಾಹಿತಿ ಬರೆದಿರುವ ಕೃತಿಗಳನ್ನು (ಕನಿಷ್ಠ ಮೌಲ್ಯಯುತ) ಆ ‘ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ’ದಲ್ಲಿ ಸೇರಿಸಬೇಕು.

ಇನ್ನು ಮೇಲೆ ಪ್ರಕಟವಾಗುವ ಎಲ್ಲ ಕನ್ನಡ ಕೃತಿಗಳನ್ನು ಆ ಗ್ರಂಥಾಯಲಕ್ಕೆ ಸೇರಿಸುತ್ತಾ ಹೋಗಬೇಕು. ಆಗ ಭವಿಷ್ಯದ ಪೀಳಿಗೆಗೆ ಕನ್ನಡ ಸಾಹಿತ್ಯವನ್ನು ನಾವು ಶಾಶ್ವತವಾಗಿ ಉಡುಗೊರೆಯ ರೂಪದಲ್ಲಿ ನೀಡಿದಂತಾಗುತ್ತದೆ. ಕನ್ನಡ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ… ಹೀಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯ ಹೊಣೆ ಹೊತ್ತ ಸರ್ಕಾರದ ಅಧೀನದಲ್ಲಿರುವ ಹಲವಾರು ಸಂಸ್ಥೆಗಳು ನಮ್ಮಲ್ಲಿವೆ. ಅವೆಲ್ಲ ಒಂದಾಗಿ ‘ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ’ ಸ್ಥಾಪನೆ-ನಿರ್ವಹಣೆಯ ಹೊಣೆ ಹೊರಬೇಕು.

ಎಂತಹ ಸುಂದರ ಕನಸು!? ರಾಜ್ಯದ ಎಷ್ಟೋ ಹಳ್ಳಿಗಳನ್ನು ವಿದ್ಯುತ್ ಇನ್ನೂ ತಲುಪಿಲ್ಲ. ಕೋಟಿಗಟ್ಟಲೆ ಜನರು ಇನ್ನೂ ಕಂಪ್ಯೂಟರ್ ಮುಟ್ಟಿಯೇ ನೋಡಿಲ್ಲ. ಅಂತರ್ಜಾಲ ಎಂದರೆ ಏನು ಎಂಬ ಅರಿವು ಶೇಕಡಾ 80ರಷ್ಟು ಮಂದಿಗೆ ಇಲ್ಲವೇ ಇಲ್ಲ. ಹಾಗಿರುವಾಗ ಇಂತಹ ಕನಸು ಎಷ್ಟರ ಮಟ್ಟಿಗೆ ಫಲಪ್ರದವಾಗಲು ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಆದರೆ, ಹಾಗೆಂದುಕೊಂಡು ನಾವು ಕೈಕಟ್ಟಿ ಕುಳಿತರೆ ಇಂಗ್ಲಿಷ್ ಉಳಿದ ಹಲವಾರು ಭಾಷೆಗಳನ್ನು ಆಪೋಶನ ಮಾಡಿಕೊಂಡಂತೆ ಕನ್ನಡವನ್ನೂ ನುಂಗಿ ನೀರು ಕುಡಿದು ಬಿಟ್ಟೀತು. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಯ ನಿಟ್ಟಿನಲ್ಲಿ ತಂತ್ರಜ್ಞಾನದ ಮೊರೆ ಹೋಗಿ ಅದನ್ನು ಬಳಸಿಕೊಳ್ಳುವುದು ಅನಿವಾರ್ಯ.