ಬೆರಗುಗೊಳಿಸುವ ‘ಪೂಜಾ ಕುಣಿತ’

ಕುತೂಹಲದ ತವರು-ಪೂಜಾ ಕುಣಿತ

ಹಲಗೆ ಬಡಿತ ತಾರಕಕ್ಕೇರುತ್ತಿದ್ದಂತೆಯೇ ನೋಡುಗರ ಕಣ್ಣಿಗೆ ರಸದೌತಣ ಸಿಗುತ್ತದೆ. ಹಲಗೆಯ ಗಸ್ತನ್ನೂ ಮೀರಿದ ನೋಟ ಇವರ ಹುಬ್ಬು ಮೇಲೇರುವಂತೆ ಮಾಡುತ್ತದೆ. ಮೂಗಿನ ಮೇಲೆ ಅರಿವಿಲ್ಲದೆಯೇ ಬೆರಳೇರುತ್ತದೆ. ಇದು ‘ಪೂಜಾ ಕುಣಿತ’ದ ವೈಶಿಷ್ಟ.

ದೇವರಿಗೆ ತಮ್ಮ ಪ್ರೀತಿ, ಗೌರವ, ಭಕ್ತಿ ತೋರಿಸುವ ನಿಟ್ಟಿನಲ್ಲಿ ಹುಟ್ಟಿದ ಹಲವು ರೀತಿಯ ಕಲೆಗಳಲ್ಲಿ ಪೂಜಾ ಕುಣಿತವೂ ಮುಖ್ಯವಾದದ್ದು. ಈ ಕುಣಿತ ಹಲವು ಕುತೂಹಲಗಳ ತವರು.

ಐದು ಅಡಿ ಎತ್ತರ ನಾಲ್ಕು ಅಡಿ ಅಗಲದ ಬಿದಿರಿನಿಂದ ಮಾಡಿದ ಗಳು  ಹಚ್ಚಿ  ಜೋಡಿಸಿದ ತಳಿಯಾಳಿಗೆ ಮನೆ ಮಾಡಿದ ಊರದೇವತೆಯನ್ನು ತಲೆ ಮೇಲೆ ಹೊತ್ತರೆ ಸಾಕು ಭಕ್ತಿ ಮೈಯೊಳಗೆ  ಪ್ರವಾಹದಂತೆ ಹರಿಯುತ್ತದೆ. ಮೈಮೇಲಿನ ತೂಕ ಹೂಹಗುರವಾಗುತ್ತದೆ. ನೋಡುಗರ ಮನದಿಂದ ಮರೆಯಾಗುತ್ತಾರೆ. ಭಾವಾವೇಶ ಮೈತುಂಬಿ ಡಕ್ ಡಕ್ ಹಲಗೆ ಬಡಿತಕ್ಕೆ ಮಾತ್ರ ಹೆಜ್ಜೆ ಸೇರುತ್ತದೆ. ಹಲಗೆಯ ನಾದಕ್ಕೆ ಜೋಡಿಯಾಗಿ ಹೊಸ ಬೆರಗು ನೆಲೆಮಾಡುತ್ತದೆ.

ತಳಿಗಳೊಳಗೆ ದೇವರನ್ನು ಕೂರಿಸಿದ ಮಾತ್ರಕ್ಕೆ ‘ಪೂಜೆಗಳು’ ಸಿದ್ಧವಾಗುವುದಿಲ್ಲ. ಅದಕ್ಕೆ ವಿಶೇಷ ರೀತಿಯ ಸಿಂಗಾರ ನಡೆಯಬೇಕು. ತಳಿಯ ಮಧ್ಯೆ ಮರದ ಹಲಗೆ ಇಟ್ಟು ಅದಕ್ಕೆ ದೇವತೆ ಮುಖವಾಡ ಕಟ್ಟಬೇಕು. ಎರಡೂ ಕಡೆ ಬಣ್ಣಬಣ್ಣದ ಸೀರೆ ತೂಗಿದರೆ ಕಣ್ಣಿಗೆ ರಂಗು. ತಳಿಯ ಮೇಲ್ಭಾಗದಲ್ಲಿ ಸಿಂಗಾರಕ್ಕೆ ಶೃಂಗವೆಂಬಂತಹ ಅರ್ಧಚಂದ್ರಾಕಾರದ ಹಿತ್ತಾಳೆಯ ಪ್ರಭಾವಳಿ. ದೇವರ ಮುಖವಾಡಕ್ಕೆ ಭಕ್ತರು ಹರಕೆಯಾಗಿ ಒಪ್ಪಿಸಿದ ವಿವಿಧ ವಸ್ತುಗಳು, ವಿಗ್ರಹಕ್ಕೆ ಹೂ ಸಿಂಗಾರ. ಇವೆಲ್ಲವೂ ಕುಣಿತಕ್ಕೆ ಭಾರವೇ ಅಲ್ಲ ಎನ್ನುವಂಥಹ ಕಲಾವಿದರ ರೀತಿಯೇ ಹೊಸತನದ ಅನುಭವ ನೀಡುವಂತಹದ್ದು.

ಹೊಸ ರೀತಿ : ಕೋಲಾರ, ಬೆಂಗಳೂರು, ಮಂಡ್ಯದಲ್ಲಿ ವ್ಯಾಪಕವಾಗಿರುವ ಈ ಪೂಜಾ ಕುಣಿತಕ್ಕೆ ಹೊಸ ರೀತಿ ತಂದುಕೊಟ್ಟವರು ಕಲಾವಿದರೇ. ಬಿಳಿ ಬನಿಯನ್ ಮತ್ತು ನಿಕ್ಕರ್ ಧರಿಸಿದ ಕಲಾವಿದರು ಬಾಗುತ್ತಾ ಬಳುಕುತ್ತಾ ಕುಣಿಯುತ್ತಾರೆ. ತಲೆಯ ಮೇಲೆ ಪೂಜೆಗಳನ್ನು ಹೊರಲು ಸಾಧ್ಯವಾಗುವಂತೆ ತಳಿಯ ಬುಡದಲ್ಲಿ ವ್ಯವಸ್ಥೆಯಿರುತ್ತದೆ.

ತಲೆ ಮೇಲೆ ಪೂಜೆ ಹೊತ್ತು ಹಲಗೆಗೆ ಹೆಜ್ಜೆ ಹಾಕುತ್ತಾ ಕತ್ತನ್ನು ಮಾತ್ರ ತಿರುಗಿಸಿ ಇಡೀ ಪೂಜೆಯನ್ನು ಹೊರಳಿಸುವುದು ನೋಡಲು ಸುಂದರವಾಗಿರುತ್ತದೆ. ಮೈ ಅಲುಗಾಡದೆಯೇ ಪೂಜೆ ಬೇಕಾದ ದಿಕ್ಕಿಗೆ ಹೊರಳುತ್ತದೆ. ಮಡಿಕೆಯ ಮೇಲೆ ಹುಡುಗನನ್ನು ಕೂರಿಸಿಕೊಂಡು ಪೂಜೆ ಹೊತ್ತು ಹಗ್ಗದ ಮೇಲೆ ಸಲೀಸಾಗಿ ನಡೆಯುವುದು ಮೈಜುಂ ಎನಿಸುವ ದೃಶ್ಯಗಳು. ಪೂಜೆ ಹೊತ್ತು ನೆಲಕ್ಕೆ ಬಾಗಿ ಬಾಯಿಂದ ನಾಣ್ಯ ಹೆಕ್ಕುವುದು, ನೋಟು ತೆಗೆಯುವುದು, ಸೂಜಿ ಆಯುವುದು ಖುಷಿ ನೀಡುತ್ತವೆ.

ಪೂಜಾ ಕುಣಿತಕ್ಕೆ ಕಲಾವಿದರು ಹಲವು ಶೈಲಿಗಳನ್ನೂ ಒದಗಿಸಿದ್ದಾರೆ. ತೊಟ್ಟಿಲು ಕುಣಿತ, ಸುತ್ತು ಕುಣಿತ ಎದುರು ಕುಣಿತ ಇವು ಇಂತಹ ಬಗೆಗಳು.

ಮೋನಿ

moni

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s